ಚಿಕ್ಕಬಳ್ಳಾಪುರ: ನನಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಬೇಡವೇ ಬೇಡ, ನನಗೆ ಸಚಿವ ಸ್ಥಾನವೇ ಬೇಕು ಎಂದು ಬಾಗೆಪಲ್ಲಿ ಕ್ಷೇತ್ರದ ಶಾಸಕ ಎಸ್. ಎನ್ ಸುಬ್ಬಾರೆಡ್ಡಿ ಪಟ್ಟುಹಿಡಿದಿದ್ದಾರೆ.
ಕರ್ನಾಟಕ ರಾಜ್ಯ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶಾಸಕ ಸುಬ್ಬಾರೆಡ್ಡಿ ಆಯ್ಕೆಯಾಗಿದ್ದರು. ಆದರೆ ಇದೀಗ ಅವರು ನನಗೆ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ಬೇಡವೇ ಬೇಡ ಎಂದು ನಿರಾಕರಿಸಿದ್ದಾರೆ.
ಎರಡೂವರೆ ವರ್ಷದ ನಂತರ ಸಚಿವ ಸ್ಥಾನ ಕೂಡುವುದಾಗಿ ಹೇಳಿದ್ದರು. ನಂತರ ಸಚಿವ ಸಂಪುಟ ರಚನೆಯ ವೇಳೆ ಎರಡನೇ ಅವಧಿಗೆ ಸಚಿವ ಸ್ಥಾನ ಕೂಡುವುದಾಗಿ ಭರವಸೆ ನೀಡಿದ್ದರು ಎಂದು ಸುಬ್ಬಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಈಗ ಅವರು ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು, ನನಗೆ ಸಚಿವ ಸ್ಥಾನ ಕೊಡಿ. ಯಾವುದೇ ನಿಗಮ ಮಂಡಳಿ ಸ್ಥಾನ ಬೇಡ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಅವರಿಗೆ ಶಾಸಕ ಸುಬ್ಬಾರೆಡ್ಡಿ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ನಿನ್ನೆಯಷ್ಟೇ (ಶುಕ್ರವಾರ) ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು. 34 ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ ನೀಡಿತ್ತು. ಬಾಗೇಪಲ್ಲಿ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ ಕರ್ನಾಟಕ ರಾಜ್ಯ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಈಗ ಅಧ್ಯಕ್ಷ ಸ್ಥಾನ ಬೇಡ, ಬದಲಾಗಿ ಸಚಿವ ಸ್ಥಾನವೇ ಬೇಕು ಎಂದು ಪಟ್ಟು ಹಿಡಿದಿದ್ದು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಅವರು ತಿರಸ್ಕರಿಸಿದ್ದಾರೆ.