Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಬಿ.ವೈ.ವಿಜಯೇಂದ್ರ ವಿರುದ್ಧ ನಾನು ಯಾವುದೇ ದೂರು ನೀಡಿಲ್ಲ: ಪ್ರತಿಪಕ್ಷ ನಾಯಕ ಆರ್.‌ಅಶೋಕ್‌ ಸ್ಪಷ್ಟನೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನಾನು ಯಾವುದೇ ದೂರು ನೀಡಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಭಾರೀ ಸದ್ದು ಮಾಡುತ್ತಿವೆ. ಒಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸ್ಥಾನದಿಂದ ಕೆಳಗಿಳಿಸಲು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅಂಡ್‌ ಟೀಂ ತುದಿಗಾಲಲ್ಲಿ ನಿಂತಿದೆ.

ಈ ಮಧ್ಯೆ ರಾಧಾ ಮೋಹನ್‌ ದಾಸ್‌ ಅಗರ್ವಾಲ್‌ ಅವರು ರಾಜ್ಯಕ್ಕೆ ಆಗಮಿಸಿ ಎಲ್ಲರ ಬಂಡಾಯ ಶಮನ ಮಾಡುವ ಪ್ರಯತ್ನ ಮಾಡಿದರು.

ನಿನ್ನೆ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಮಾಜಿ ಸಂಸದ ಶ್ರೀರಾಮುಲು ವಿರುದ್ಧ ರಾಧಾ ಮೋಹನ್‌ ದಾಸ್‌ ಅಗರ್ವಾಲ್‌ ಅವರು ಕೆಂಡಾಮಂಡಲರಾದರು. ಈ ವೇಳೆ ಆಕ್ರೋಶಗೊಂಡ ಶ್ರೀರಾಮುಲು ಸಭೆಯಿಂದ ಹೊರನಡೆದು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು. ಬಳಿಕ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪ್ರತಿಪಕ್ಷ ನಾಯಕ ಆರ್.‌ಅಶೋಕ್‌ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು.

ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಆರ್.‌ಅಶೋಕ್‌ ಅವರು, ಪಕ್ಷದಲ್ಲಿ ಗೊಂದಲ ಇರುವುದು ನಿಜ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಶ್ರೀರಾಮುಲು ಅವರೊಂದಿಗೆ ನಾನು ಹಾಗೂ ಬಸವರಾಜ ಬೊಮ್ಮಾಯಿ ಚರ್ಚಿಸಲಿದ್ದೇವೆ. ನಮ್ಮಲ್ಲಿ ಯಾವುದೇ ಟೀಮ್‌ ಇಲ್ಲ. ನಾನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ. ಆದರೂ ದೂರು ನೀಡಿದ್ದೇನೆ ಎಂದು ಸುಳ್ಳು ಹೇಳಲಾಗುತ್ತಿದೆ. ಒಕ್ಕಲಿಗರು ಪ್ರತ್ಯೇಕವಾಗಿ ಸಭೆ ಮಾಡಿಲ್ಲ ಅಥವಾ ಗುರುತಿಸಿಕೊಂಡಿಲ್ಲ. ಇದು ಕೂಡ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದರು.

 

 

Tags:
error: Content is protected !!