ಬೆಂಗಳೂರು: ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ಬೇಕಾಗಿದ್ದ ಗರಿಷ್ಠ ವಯೋಮಿತಿ ಗೊಂದಲಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ.
ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗೆ ಪ್ರವೇಶಾತಿಗಾಗಿ ನಿಗದಿಪಡಿಸಲಾಗಿದ್ದ ವಯೋಮಿತಿ ಬಗ್ಗೆ ಹಲವಾರು ಗೊಂದಲಗಳಿದ್ದು, ಸದ್ಯ ಈ ಎಲ್ಲಾ ಗೊಂದಲಕ್ಕೂ ತೆರೆ ಬಿದ್ದಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಎಲ್‌ಕೆಜಿಗೆ 4-6 ವರ್ಷ, ಯುಕೆಜಿಗೆ 5-7 ವರ್ಷ ಹಾಗೂ ಒಂದನೇ ತರಗತಿಗೆ 6-8 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಇದನ್ನು ಮೀರಿದ ಬಳಿಕ ಪ್ರವೇಶಾತಿ ದೊರೆಯುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಎಂಟು ವರ್ಷ ಮೀರಿದ ಮಕ್ಕಳನ್ನು ಶಾಲೆ ಬಿಟ್ಟ ಮಕ್ಕಳು ಎಂದು ಪರಿಗಣಿಸಲಾಗುವುದು ಹಾಗೂ ಅಂತಹ ಮಕ್ಕಳನ್ನು ಅವರ ವಯೋಮಿತಿಗೆ ತಕ್ಕಂತೆ ತರಗತಿಗಳಿಗೆ ಪ್ರವೇಶ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದೆ. ಆ ಮೂಲಕ ಇದ್ದ ಎಲ್ಲಾ ಗೊಂದಲಗಳಿಗೆ ಶಿಕ್ಷಣ ಇಲಾಖೆ ಅಂತ್ಯ ಆಡಿದೆ.