Mysore
25
scattered clouds

Social Media

ಶನಿವಾರ, 31 ಜನವರಿ 2026
Light
Dark

ಡಿಸಿಎಂ ಡಿಕೆಶಿ ಅವರಿಂದ ಆ ಹೇಳಿಕೆಯನ್ನು ಯಾರು ನಿರೀಕ್ಷಿಸಿರಲಿಲ್ಲ: ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ಅಂತರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸ್ಯಾಂಡಲ್‌ವುಡ್‌ ಕಲಾವಿದರಿಗೆ ವಾರ್ನಿಂಗ್‌ ನೀಡಿದ್ದರು. ಆದರೆ  ಇದೀಗ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಡಿಸಿಎಂ ಡಿಕೆಶಿ ಅವರಿಂದ ಆ ಹೇಳಿಕೆಯನ್ನು ಯಾರು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಮಾರ್ಚ್.‌2) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ. ಶಿವಕುಮಾರ್ ಅವರ ವಾರ್ನಿಂಗ್‌ಗೆ ಯಾರೂ ಹೆದರಿ ಕೂರೋದಿಲ್ಲ. ಡಿಕೆಶಿ ಹೇಳಿಕೆ ಕಲಾವಿದರು, ನಿರ್ಮಾಪಕ, ನಿರ್ದೇಶಕರು ಹಾಗೂ ತಂತ್ರಜ್ಞರ ಮನಸ್ಸಿಗೆ ನೋವು ಉಂಟು ಮಾಡಿದೆ. ಕಲಾವಿದರು ತುಂಬಾ ಸೂಕ್ಷ್ಮ ಸ್ವಭಾವದ ವ್ಯಕ್ತಿಗಳು. ಡಾ.ರಾಜ್‌ಕುಮಾರ್ ಹೋರಾಟ ಮಾಡಿದಾಗ ಇಡೀ ಚಿತ್ರರಂಗ ಭಾಗಿಯಾಗಿತ್ತು. ಯಾರು ಹೋರಾಟಕ್ಕೆ ಕೈ ಜೋಡಿಸಲ್ಲ ಎಂದು ಹೇಳಿರಲಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದವರು ರಾಜ್ಯದಲ್ಲಿ ಚುನಾವಣೆ ವೇಳೆ ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಅದು ರಾಜಕೀಯ ಪ್ರೇರಿತ ಪಾದಯಾತ್ರೆಯಾಗಿತ್ತು. ಹೀಗಾಗಿ ಸಿನಿಮಾ ನಟ-ನಟಿಯರು ರಾಜಕೀಯ ಪ್ರೇರಿತ ಪಾದಯಾತ್ರೆಯಲ್ಲಿ ಭಾಗವಹಿಸುವುದು ಸೂಕ್ತ ಅಲ್ಲವೆಂಬ ಕಾರಣಕ್ಕೆ ಭಾಗಿಯಾಗಿರಲಿಲ್ಲ. ಅಲ್ಲದೇ ಈ ವಿಚಾರದಲ್ಲಿ ಅವರು ಭಾಗಿಯಾಗದೇ ಇರುವುದು ಅವರ ವೈಯಕ್ತಿಕ ಅಭಿಪ್ರಾಯ ಇರಬಹುದು. ಯಾರಿಗೂ ನೀವು ಕಟ್ಟುನಿಟ್ಟಾಗಿ ಹೋರಾಟದಲ್ಲಿ ಭಾಗಿಯಾಗಿ ಎಂದು ತಾಕೀತು ಮಾಡಿದರೂ, ಇಲ್ಲಿ ಯಾರು ಕೇಳೋರು ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ರಾಜ್ಯದಲ್ಲಿ ಸಾಕಷ್ಟು ಸರ್ಕಾರಗಳು ಬಂದಿವೆ, ಹೋಗಿವೆ. ಸಿನಿಮಾ ರಂಗದವರು ರಾಜ್ಯದಲ್ಲಿ ಅನೇಕ ಮುಖ್ಯಮಂತಿಗಳನ್ನು ನೋಡಿದ್ದಾರೆ. ಆದರೆ ರಾಜ್ಯದ ರಾಜಕೀಯದಲ್ಲಿ ಇಂತಹ ಹೇಳಿಕೆಯನ್ನು ಯಾರೂ ನೀಡಿಲ್ಲ. ಹಾಗಾಗಿ ಇಂತಹ ಹೇಳಿಕೆಯಿಂದ ಕಲಾವಿದರನ್ನು ಪ್ರಚೋದನೆ ಮಾಡೋದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಕಲಾವಿದರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆದ ಸಮಯದಲ್ಲಿ ಹೊರಗೆ ಬಂದು ಮುಂದಿನ ದಿನಗಳಲ್ಲಿ ಮಾತನಾಡುತ್ತಾರೆ. ಕಲಾವಿದರು ತಮ್ಮ ಶ್ರಮದಿಂದ ಗೌರವದ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೇ ಕಷ್ಟಪಟ್ಟು ಸಾಲ ಮಾಡಿ ಸಿನಿಮಾ ಮಾಡುತ್ತಾರೆ. ಹೀಗಾಗಿ ಕಲಾವಿದರ ಮೇಲೆ ದಬ್ಬಾಳಿಕೆ ಹಾಗೂ ದೌರ್ಜನ್ಯದ ಹೇಳಿಕೆಗಳನ್ನು ನೀಡುವುದನ್ನು ಈ ರಾಜ್ಯದ ಜನತೆ ಸಹಿಸೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Tags:
error: Content is protected !!