ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲು ಕಂಡ ಬೆನ್ನಲ್ಲೇ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ತಮ್ಮ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಅವರು, ನನ್ನ ಸೋಲು ಅನಿರೀಕ್ಷಿತ. ಸೋಲು ಯಾಕಾಯಿತೆಂದು ಈಗಾಗಲೇ ಕಾರಣ ಕೊಟ್ಟಿದ್ದೇನೆ. ನಾನು ಸೋಲಿಗೆ ಹೆದರುವ ವ್ಯಕ್ತಿಯಲ್ಲ. ಇಂತಹ ಅನೇಕ ಸೋಲುಗಳನ್ನು ಪಕ್ಷ ಜೀರ್ಣಿಸಿಕೊಂಡಿದೆ. ಸತತ ಸೋಲುಗಳ ಮೂಲಕ ಪಕ್ಷ ಫೀನಿಕ್ಸ್‌ನಂತೆ ಎದ್ದು ಬಂದಿದೆ.
ಈ ಸೋಲು ನನಗೆ ಭಾರೀ ನೋವುಂಟು ಮಾಡಿದೆ. ನಿಜ. ಇಲ್ಲ ಎಂದು ಹೇಳಿ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ. ಹಾಗಂತ ನಾನು ಸೋಲುತ್ತೇನೆ ಎಂದು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಗೆಲ್ಲಲು ಪ್ರಾಮಾಣಿಕವಾಗಿ ಹೋರಾಡಿದ್ದೇವೆ. ಮತ್ತೆ ಫುಟಿದೆದ್ದು ಬರುವ ಛಲ ನನಗಿದೆ. ಹಿಂದಿನ ಎರಡು ಸೋಲುಗಳು ನನಗೆ ಅಸಹಾಯಕತೆಯನ್ನು ಮೆಟ್ಟಿನಿಂತು ಅಪಮಾನ ಧಿಕ್ಕರಿಸಿ ಸೆಣಸುವ ಆತ್ಮಬಲ ಕೊಟ್ಟಿವೆ.
ಚನ್ನಪಟ್ಟಣದಲ್ಲೂ ಅದೇ ಛಲ, ಆತ್ಮಬಲದಿಂದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಜೊತೆಗೂಡಿ ದಿಟ್ಟ ಹೋರಾಟ ನಡೆಸಿದ್ದೇನೆ.
ನನ್ನ ಸೋಲು ನನ್ನ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಇಡೀ ರಾಜ್ಯದ ಕಾರ್ಯಕರ್ತರೆಲ್ಲರೂ ವೀರಯೋಧರಂತೆ ಚನ್ನಪಟ್ಟಣದಲ್ಲಿ ಹಗಲಿರುಳು ದುಡಿದರು. ಅಂತಿಮವಾಗಿ ನನಗೆ ಸೋಲಾಯಿತು. ನಾನು ಅದನ್ನು ಶಿರಬಾಗಿ ಸ್ವೀಕರಿಸಿದ್ದೇನೆ ಎಂದು ಬರೆದುಕೊಳ್ಳುವ ಮೂಲಕ ಕಾರ್ಯಕರ್ತರಿಗೆ ಧೈರ್ಯ ಹೇಳಿದ್ದಾರೆ.