ಬೆಂಗಳೂರು: ಕಾಂಗ್ರೆಸ್ ವಿರುದ್ಧ ಹೋರಾಡುವುದರಿಂದ ಹಿಡಿದು ಕಾಂಗ್ರೆಸ್ ಪಕ್ಷಕ್ಕೆ ಅಂಟಿಕೊಳ್ಳುವವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಪ್ರಯಾಣವು ಅವಕಾಶವಾದಕ್ಕೆ ಎತ್ತಿ ಹಿಡಿದ ಕೈ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 1983ರಲ್ಲಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ವಿರೋಧಿ ಪಕ್ಷವಾದ ಭಾರತೀಯ ಲೋಕದಳದೊಂದಿಗೆ ಪ್ರಾರಂಭಿಸಿದರು. ಕಾಂಗ್ರೆಸ್‍ನ ಸಿದ್ಧಾಂತವನ್ನು ವಿರೋಧಿಸುತ್ತಾ ದಶಕಗಳ ಕಾಲ ಕಳೆದಿರುವ ಸಿದ್ದರಾಮಯ್ಯನವರು ಈಗ ಹುಟ್ಟಿನಿಂದ ಕಾಂಗ್ರೆಸ್ಸಿಗರ ಪರವಾಗಿ ಹೋರಾಡಿದಂತೆ ಎದೆ ತಟ್ಟಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ವಿರೋಧಿ ಪಕ್ಷವಾದ ಭಾರತೀಯ ಲೋಕದಳದೊಂದಿಗೆ ತಮ್ಮ ಅವಧಿಯ ನಂತರ ಅವರು ಜನತಾ ಪಕ್ಷ, ನಂತರ ಜನತಾದಳ ಮತ್ತು ಜನತಾದಳ(ಜಾತ್ಯತೀತ)ಕ್ಕೆ ಸೇರಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಂಪುಟದಲ್ಲಿ ಮೊದಲ ಬಾರಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ಅವರು, ಕಾಂಗ್ರೆಸ್ ವಿರುದ್ಧ ಹೋರಾಡುತ್ತಲೇ ಉಪಮುಖ್ಯಮಂತ್ರಿ ಸಹ ಆದರು ಎಂದಿದ್ದಾರೆ.
ಸದಾ ಕಾಲ ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದ ಸಿದ್ದರಾಮಯ್ಯನವರು, ಒಂದು ಪಕ್ಷದಿಂದ ಇನ್ನೊಂದಕ್ಕೆ ಹಾರುವುದು ಅವರಿಗೇನು ಹೊಸದಲ್ಲ. 2005ರಲ್ಲಿ ಜೆಡಿಎಸ್‍ನಿಂದ ಹೊರಬಂದ ನಂತರ, ಅವರು ಪಕ್ಷವನ್ನು ರಚಿಸಿದರು, 2006ರಲ್ಲಿ ಅದನ್ನು ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸಿದರು. ತಮ್ಮದೇ ಪಕ್ಷದ ಅಡಿಯಲ್ಲಿ ಒಂದು ಚುನಾವಣೆಯಲ್ಲೂ ಸ್ಪರ್ಧಿಸುವ ಸಾಹಸ ಮಾಡಲಿಲ್ಲ ಎಂಬುದು ನಿಗೂಢ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಅವರು ಮೂದಲಿಸಿದ್ದಾರೆ.
ಒಂದು ಕಾಲದಲ್ಲಿ ಕಾಂಗ್ರೆಸ್ ನಾಯಕರಾದ ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಕೆಂಡಕಾರುತ್ತಿದ್ದ ಸಿದ್ದರಾಮಯ್ಯನವರು, ಇಂದು ಅಧಿಕಾರಕ್ಕಾಗಿ ಅವರ ಸೇವೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ತಯಾರಿ ನಡೆಸುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ದ್ರೋಹದಿಂದ ಬದುಕುವವರು, ದ್ರೋಹದಿಂದಲೇ ಬೀಳುತ್ತಾರೆ. ಇತಿಹಾಸವು ಪುನರಾವರ್ತನೆಯಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.





