ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿಗಣತಿ (Caste Census) ವಿಚಾರದ ಕುರಿತು ಸರ್ವ ಪಕ್ಷಗಳ ಸಭೆ ಕರೆಯಬೇಕು ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಅಂಶಗಳನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು. ಜಾತಿ, ಧರ್ಮದ ಬಗ್ಗೆ ಚರ್ಚೆ ಮಾಡಿದರೆ ಯಾರ ಹೊಟ್ಟೆಯೂ ತುಂಬುವುದಿಲ್ಲ. ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಜಾತಿಗಣತಿ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಜಾತಿಗಣತಿ ವರದಿ ಅಂಶಗಳು ಸೋರಿಕೆಯಾಗಿವೆ. ಸಮೀಕ್ಷೆ ಬಗ್ಗೆ ಚರ್ಚೆಯಾಗುವ ಬದಲು ಆ ಜಾತಿ ಎಷ್ಟು, ಈ ಜಾತಿ ಎಷ್ಟು ಎಂಬ ಚರ್ಚೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:- ಎಲ್ಲರ ಅಭಿಪ್ರಾಯದ ಬಳಿಕ ಜಾತಿಗಣತಿ ಬಗ್ಗೆ ಮುಂದಿನ ನಿರ್ಧಾರ: ಸಚಿವ ಪರಮೇಶ್ವರ್
ವರದಿ ಪೂರ್ಣಗೊಂಡ ಬಳಿಕ ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ. ನಾವು ವರದಿಯನ್ನು ಸ್ವಾಗತ ಮಾಡಿದ್ದೇವೆ. ವಿರೋಧ ಮಾಡಿಲ್ಲ. ಜಾತಿಗಣತಿ ಅಂದರೆ ಯಾವ ಯಾವ ಸಮಾಜ, ಯಾವ ಜಾತಿ, ಅದರಡಿ ಬರುವ ಉಪಜಾತಿಗಳು ಸೇರುತ್ತವೆ. ಮುಸ್ಲಿಮರಲ್ಲಿ ಶಿಯಾ ಮತ್ತು ಸುನ್ನಿ ಸೇರಿದಂತೆ ಹಲವಾರು ಜಾತಿಗಳಿವೆ. ಜಾತಿ ಆಧಾರದ ಮೇಲೆ ಉಪಜಾತಿಗಳು, ಒಳಪಂಗಡಗಳ ಬಗ್ಗೆ ಗಣತಿ ಮಾಡಿದ್ದೀರಾ ಎಂಬುದು ಗೊತ್ತಿಲ್ಲ. ಸಂವಿಧಾನದಲ್ಲಿ ಜಾತಿಗಣತಿ ಬಿಡುಗಡೆ ಮಾಡುವ ಸರ್ವೇ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ಹೊರತು ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಅವರು ಹೇಳಿದರು.





