ಹಾವೇರಿ: ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದು, ಮುಂದಿನ ಬಜೆಟ್‌ನ್ನೂ ಸಿದ್ದರಾಮಯ್ಯ ಅವರೇ ಮಂಡನೆ ಮಾಡುತ್ತಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಕೆಲ ತಿಂಗಳಿನಿಂದ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಲೇ ಇದ್ದು, ಒಳಗೊಳಗೆ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಸಿಎಂ ಬದಲಾವಣೆ ಮಾಡಲೇಬೇಕೆಂದು ಪಣ ತೊಟ್ಟಿದ್ದಾರೆ.
ಈ ಮಧ್ಯೆ ನಿನ್ನೆ ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಿದ್ದು, ಹಲವು ಕ್ಷೇತ್ರಗಳಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ.
ಈ ಬಗ್ಗೆ ಹಾವೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಹಕಾರ ಸಚಿವ ರಾಜಣ್ಣ ಅವರು, ಮುಂದಿನ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಮುಂದಿನ ಬಾರಿಯೂ ಅವರೇ ಬಜೆಟ್ ಮಂಡನೆ ಮಾಡುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅಂತಿಮವಾಗಿ ಹೈಕಮಾಂಡ್ ನಿರ್ಣಯ ಮಾಡುತ್ತದೆ ಎಂದರು.