Mysore
21
overcast clouds
Light
Dark

ಕರ್ನಾಟಕದಲ್ಲಿ ಮುಂದಿನ ಐದು ದಿನಗಳಲ್ಲಿ ಭರ್ಜರಿ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಭರ್ಜರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಕೆಲವು ದಿನಗಳ ಹಿಂದೆ ಅಬ್ಬರಿಸಿದ್ದ ಮುಂಗಾರು ಮಳೆ ಸದ್ಯಕ್ಕೆ ಹಲವು ಜಿಲ್ಲೆಗಳಲ್ಲಿ ತಣ್ಣಗಾಗುವ ಮುನ್ಸೂಚನೆ ನೀಡಿದೆ. ಹವಾಮಾನದಲ್ಲಿನ ಬದಲಾವಣೆ ಸಂದರ್ಭದಲ್ಲಿ ಕಳೆದ ಶನಿವಾರದಿಂದ ಮಲೆನಾಡು, ಕರಾವಳಿಯಲ್ಲಿ ಭಾರೀ ಆರ್ಭಟ ಮುಂದುವರೆಸಿತ್ತು. ಇದೇ ವೇಳೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿಗೆ ಮಳೆ ಆಗಿರಲಿಲ್ಲ.

ಕಳೆದ ಕೆಲ ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣ ಈಗ ಮತ್ತೆ ತನ್ನ ಆರ್ಭಟ ಶುರುಮಾಡಲಿದ್ದಾನೆ. ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಿಗೆ ಮುಂಗಾರು ಮಳೆ ಶಾಕ್‌ ನೀಡಿದೆ. ಕೇವಲ ಕರ್ನಾಟಕ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬರುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳ ಪೈಕಿ ಮೊದಲ ಮೂರು ದಿನ ಅಂದರೆ ಇಂದಿನಿಂದ ಜುಲೈ.5ರವರೆಗೆ ಸಾಧಾರಣದಿಂದ ಮಳೆ ಆಗಲಿದೆ. ಹೀಗಾಗಿ ಮೂರು ಜಿಲ್ಲೆಗಳಿಗೆ ಮಾತ್ರ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ನಂತರ ಎರಡು ದಿನ ಕರಾವಳಿಯಲ್ಲೇ ಮಳೆ ತೀವ್ರಗೊಳ್ಳಲಿದೆ. ಜುಲೈ.6 ಮತ್ತು 7ರಂದು ಕರಾವಳಿಯ ಇದೇ ಮೂರು ಜಿಲ್ಲೆಗಳಿಗೆ ಅತ್ಯಧಿಕ ಮಳೆ ಆಗುವ ಲಕ್ಷಣವಿದೆ. ಆದ್ದರಿಂದ ಈ ಎರಡು ದಿನ ಆರೆಂಜ್‌ ಅಲರ್ಟ್‌ ನೀಡಲಾಗಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

ಇನ್ನೂ ಮುಂದಿನ ಐದು ದಿನಗಳಲ್ಲಿ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಮೈಸೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ. ಇಲ್ಲಿ ಜೋರಾಗಿದ್ದ ಮಳೆಯಬ್ಬರ ಇದೀಗ ಇಳಿಕೆ ಆಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ತುಮಕೂರು, ದಾವಣಗೆರೆ, ಬಳ್ಳಾರಿ, ಕೋಲಾರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಾಮಾನ್ಯ ಮಳೆ ಬರುವ ಮುನ್ಸೂಚನೆಯಿದೆ.

ಇನ್ನೂ ವಿಪರ್ಯಾಸವೆಂದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸುಸೂತ್ರವಾಗಿ ಮಳೆ ಆಗುತ್ತಿಲ್ಲ. ಇಲ್ಲಿ ಕೆಲವು ಜಿಲ್ಲೆಗಳಲ್ಲಿ ಮಳೆ ಬಂದರೆ ಮತ್ತೆ ಕೆಲವು ಜಿಲ್ಲೆಗಳಿಗೆ ಮಳೆಯೇ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಉತ್ತಮ ಮಳೆಗೆ ಕಾಯುತ್ತಿದ್ದಾರೆ.