ಬೆಂಗಳೂರು : ಮಂಡ್ಯದಲ್ಲಿ ಸಂಚಾರಿ ಪೊಲೀಸರ ವಾಹನ ತಪಾಸಣೆ ವೇಳೆ ಸಂಭವಿಸಿದ ಅಪಘಾತದಲ್ಲಿ 3 ವರ್ಷದ ಮಗು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆ ಎಚ್ಚೆತ್ತಿದೆ. ಸಕಾರಣವಿಲ್ಲದೆ ವಾಹನಗಳನ್ನು ತಡೆದು ತಪಾಸಣೆ ನಡೆಸಬಾರದೆಂಬ ಅಂಶವನ್ನೊಳಗೊಂಡ ಹೊಸ ಮಾರ್ಗಸೂಚಿ ಹೊರಡಿಸಿದೆ.
ವಾಹನ ತಪಾಸಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಉಲ್ಲೇಖಿಸಿದೆ. ಮಂಡ್ಯ ದುರ್ಘಟನೆ ಭವಿಷ್ಯದಲ್ಲಿ ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ. ಎಸ್. ಸಲೀಂ ಮಾರ್ಗಸೂಚಿ ಹೊರಡಿಸಿದ್ದಾರೆ.
ವೇಗವಾಗಿ ಚಲಾಯಿಸಿಕೊಂಡು ಹಿಡಿಯಲು ಬರುವ ವಾಹನ ಸವಾರರನ್ನು ಬೆನ್ನಟ್ಟುವುದು ಬೇಡ, ಬದಲಾಗಿ ಆ ವಾಹನಗಳ ನೋಂದಣಿ ಸಂಖ್ಯೆ ಗುರುತಿಸಿ ಜಿಲ್ಲಾ ಪೊಲೀಸ್ ಠಾಣಾ ಸರಹದ್ದುಗಳ ವಿವಿಧ ನಿಯಂತ್ರಣ ಕೋಣೆಗಳಿಗೆ ಮಾಹಿತಿ ರವಾನಿಸುವ ಮೂಲಕ ವಾಹನ ಸವಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದೆ.
ಮಾರ್ಗಸೂಚಿ ವಿವರ
ಸಕಾರಣವಿಲ್ಲದೆ ದಾಖಲೆ ಪರೀಕ್ಷೆಗೆ ವಾಹನ ತಡೆಯಬಾರದು
• ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆ ಗುರಿ ಇರಲಿ
• ಅಂತಹ ವಾಹನಗಳನ್ನು ತಡೆದು ಪ್ರಕರಣಗಳನ್ನು ದಾಖಲಿಸಿ
• ಈ ವೇಳೆ ಹೈವೇನಲ್ಲಿ ಜಿಗ್ ಜಾಗ್ ಮಾದರಿ ಬ್ಯಾರಿಕೇಡ್ ಬೇಡ
ರಸ್ತೆಯಲ್ಲಿ ದಿಢೀರ್ ಅಡ್ಡ ಹೋಗಿ ವಾಹನಗಳನ್ನು ನಿಲ್ಲಿಸದಿರಿ
• ದ್ವಿಚಕ್ರ ವಾಹನ ಹಿಂಬದಿ ಸವಾರನನ್ನು ಎಳೆಯಬಾರದು
• ಬೈಕ್, ಸ್ಕೂಟರ್‌ಗಳ ಕೀಲಿ ಕೈ ಕಿತ್ತುಕೊಂಡು ಹೋಗಬಾರದು





