ಮೈಸೂರು: ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಕೆಲವು ಅಭ್ಯರ್ಥಿಗಳಿಗೆ ರ್ಯಾಂಕ್ ನೀಡುವುದರಲ್ಲಿ ತಾರತಮ್ಯವಾಗಿದೆ. ಅಭ್ಯಸ ಮಾಡಿ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆಯಾಗಿ, ಮರುಪರೀಕ್ಷೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.
ಅವರು ಇಂದು(ಜೂ.15) ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು (ಎನ್.ಟಿ.ಎ) ನೀಟ್ ಪರೀಕ್ಷೆಯನ್ನು ಸರಿಯಾಗಿ ಮಾಡದೇ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಉತ್ತೀರ್ಣ ಮಾಡುವುದು ಎಷ್ಟು ಸರಿ? ಗ್ರೇಸ್ ಮಾರ್ಕ್ಸ್ ನೀಡುವುದು ಕೆಟ್ಟ ಅಭ್ಯಾಸ ಎಂದು ಹೇಳಿದರು.
ದಕ್ಷಿಣ ಭಾರತದಲ್ಲಿ ಜನ ಬಿಜೆಪಿಯನ್ನು ಬೆಂಬಲಿಸುವುದಿಲ್ಲ
ದಕ್ಷಿಣ ಭಾರತದ ಏಳು ಜನರು ಕೇಂದ್ರದಲ್ಲಿ ಸಚಿವರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಏನು ಮಾಡಿದರೂ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಜನ ಬೆಂಬಲಿಸುವುದಿಲ್ಲ. ಏಕೆಂದರೆ ಆರ್.ಎಸ್.ಎಸ್ ನಾ ರಾಜಕೀಯ ಮುಖವಾಡ ಇಲ್ಲಿಯ ಜನರಿಗೆ ತಿಳಿದಿದೆ. ಈ ಬಾರಿ ಉತ್ತರ ಭಾರತದಲ್ಲಿಯೂ ಬಿಜೆಪಿಗೆ ಹಿನ್ನಡೆಯಾಗಿದೆ. ಬಿಜೆಪಿಯ ಅಹಂಕಾರಕ್ಕೆ ಜನರು ತಕ್ಕ ಪಾಠ ಕಲಿಸಿರುವುದಾಗಿ ಆರ್.ಎಸ್.ಎಸ್ ನ ಮುಖ್ಯಸ್ಥರೇ ಹೇಳಿದ್ದಾರೆ ಎಂದರು.





