Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ: ಸಚಿವ ಕೆ.ಜೆ.ಜಾರ್ಜ್

ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ: ಬೇಡಿಕೆ ಮತ್ತು ಪೂರೈಕೆ ಮಧ್ಯೆ ಅಂತರವಿಲ್ಲದಂತೆ ನೋಡಿಕೊಳ್ಳಲು ನಿರ್ದೇಶನ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿದ್ಯುತ್ ಉತ್ಪಾದನೆ, ಖರೀದಿ/ವಿನಿಮಯ ಮತ್ತು ಪ್ರಸರಣ ಕುರಿತಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್), ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ (ಪಿಸಿಕೆಎಲ್) ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಸಚಿವರು, “ಸಮರ್ಪಕ ವಿದ್ಯುತ್ ಪೂರೈಕೆ ಜತೆಗೆ ಅಗತ್ಯ ಸಂದರ್ಭದಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆ ಮೂಲಕ ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ ಇಲ್ಲದಂತೆ ನೋಡಿಕೊಳ್ಳಬೇಕು”, ಎಂದು ಸೂಚಿಸಿದರು.

ಕೆಪಿಸಿಎಲ್ ನ ಉಷ್ಣ ವಿದ್ಯುತ್ ಸ್ಥಾವರಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನ ನಡೆಸಿದ ಅವರು, “ಕಳೆದ ಬೇಸಿಗೆಯಲ್ಲಿ ಸರಾಸರಿ 3,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಮೂಲಕ ಉಷ್ಣ ವಿದ್ಯುತ್ ಸ್ಥಾವರಗಳು ದಾಖಲೆ ನಿರ್ಮಿಸಿದ್ದವು.ಈ ಬಾರಿ ಅದಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿ ಹೊಸ ದಾಖಲೆ ಸ್ಥಾಪಿಸಬೇಕು. ಅದಕ್ಕಾಗಿ ಎಲ್ಲಾ ಉತ್ಪಾದನಾ ಘಟಕಗಳನ್ನು ಸನ್ನದ್ಧವಾಗಿ ಇಡಬೇಕು”, ಎಂದು ನಿರ್ದೇಶನ ನೀಡಿದರು.

“ರಾಯಚೂರು, ಯರಮರಸ್ ಮತ್ತು ಬ್ಳಾರಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕೆಲವು ಉತ್ಪಾದನಾ ಘಟಕಗಳು ಸ್ಥಗಿತಗೊಂಡಿರುವ ಕುರಿತು ಮಾಹಿತಿ ಪಡೆದ ಸಚಿವರು, ಕಾಲಮಿತಿ ಹಾಕಿಕೊಂಡು ಸ್ಥಾವರಗಳ ವಾರ್ಷಿಕ ನಿರ್ವಹಣೆ ಅಥವಾ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಫೆಬ್ರವರಿ ಅಂತ್ಯದೊಳಗೆ ಎಲ್ಲಾ ಘಕಗಳನ್ನು (ಆರ್ ಟಿಪಿಎಸ್ ನ ಒಂದು ಘಟಕ ಹೊರತುಪಡಿಸಿ) ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆಗೆ ಸಿದ್ಧಗೊಳಿಸಬೇಕು”, ಎಂದು ಸೂಚಿಸಿದರು.

ವಿದ್ಯುತ್ ವಿನಿಮಯಕ್ಕೆ ಒತ್ತು:
ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವ ಬದಲು ವಿದ್ಯುತ್ ವಿನಿಮಯಕ್ಕೆ ಆದ್ಯತೆ ನೀಡಬೇಕು. ಈ ಬಗ್ಗೆ ಈಗಿನಿಂದಲೇ ಅನ್ಯ ರಾಜ್ಯಗಳೊಂದಿಗೆ ಒಪ್ಪಂದಕ್ಕೆ ಮಾತುಕತೆ ನಡೆಸಬೇಕು. ಅದೇ ರೀತಿ ಅಲ್ಪಾವಧಿ ವಿದ್ಯುತ್ ಖರೀದಿ ದುಬಾರಿಯಾಗಿರುವುದರಿಂದ ಕಡಿಮೆ ದರಕ್ಕೆ ದೀರ್ಘಾವಧಿ ವಿದ್ಯುತ್ ಖರೀದಿಗೆ ಒತ್ತು ನೀಡಬೇಕು. ಹಾಗೆ ಮಾಡಿದಲ್ಲಿ ಹೆಚ್ಚುವರಿ ವಿದ್ಯುತ್ ಅನ್ನು ಪೀಕ್ ಅವರ್ ನಲ್ಲಿ ಹೆಚ್ಚು ದರಕ್ಕೆ ಮಾರಾಟ ಮಾಡಿ ಹೊರೆ ಕಡಿಮೆ ಮಾಡಬೇಕು ಎಂದು ಸೂಚನ ನೀಡಿದರು.

“ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿರುವುದರಿಂದ ಹಗಲು ವೇಳೆಯೇ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಬೇಕು. ಉಷ್ಣ ವಿದ್ಯುತ್ ಮತ್ತು ಜಲ ವಿದ್ಯುತ್ ಸ್ಥಾವರಗಳಲ್ಲಿ ಸಾಧ್ಯವಾದಷ್ಟು ರಾತ್ರಿ ವೇಳೆಯ ಬಳಕೆಗೆ ವಿದ್ಯುತ್ ಉತ್ಪಾದಿಸಬೇಕು. ಆ ಮೂಲಕ ಬೇಡಿಕೆ ಮತ್ತು ಪೂರೈಕೆಯ ನಡುವೆ ಅಂತವಿಲ್ಲದಂತೆ ಎಚ್ಚರಿಕೆ ವಹಿಸಬೇಕು” ಎಂದರು.

ಇಂಧನ ಇಲಾಖೆ ಸರ್ಕಾರದ ಅಪರ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಪಿಸಿಕೆಎಲ್ ವ್ಯವಸ್ಥಾಪಕ ನಿರ್ದೇಶಕ ಲೋಖಂಡೆ ಸ್ನೇಹಲ್ ಸುಧಾಕರ್, ಕೆಪಿಸಿಎಲ್ ನಿರ್ದೇಶಕ (ಹಣಕಾಸು) ಆರ್.ನಾಗರಾಜ್, ನಿರ್ದೇಶಕ (ತಾಂತ್ರಿಕ) ಎಸ್.ಕೃಷ್ಣಮೂರ್ತಿ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Tags:
error: Content is protected !!