ಮೈಸೂರು: ದೆಹಲಿ ರೈತ ಹೋರಾಟ ದಕ್ಷಿಣ ಭಾರತದಲ್ಲಿ ಪ್ರಬಲಗೊಳಿಸುವ ಉದ್ದೇಶದಿಂದ ಇದೇ ಜೂನ್. 24ರಂದು ಶಿವಮೊಗ್ಗದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ರೈತ ಮುಖಂಡರ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆವಿಮೆ ನೀತಿ ಬದಲಾಯಿಸಿ ಪ್ರತಿ ರೈತನ ಹೊಲದ ಬೆಳೆ ವಿಮೆ ಜಾರಿ ತರಬೇಕು. ಬರಗಾಲ ಅತಿವೃಷ್ಟಿ, ಮಳೆ ಹಾನಿ, ಪ್ರವಾಹ ಹಾನಿ ಪ್ರಕೃತಿ ವಿಕೋಪದ ಹಾನಿ ಬೆಳೆ ನಷ್ಟ ಪರಿಹಾರದ ಎನ್‌ಡಿಆರ್‌ಎಫ್ ಮಾನದಂಡ ತಿದ್ದುಪಡಿ ಮಾಡಬೇಕು. ಎಂದು ಒತ್ತಾಯಿಸುವ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ತಾರತಮ್ಯ ನೀತಿಯಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಗಮನಿಸಿ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯದ ರೈತರ ಹಿತವನ್ನ ರಕ್ಷಿಸಬೇಕು ಎಂದು ಕುರುಬೂರ್ ಶಾಂತಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಓಟಿಎಸ್ ಸಾಲ ಮೇಳ ನಡೆಸಿ ಹೊಸ ಸಾಲ ವಿತರಿಸಬೇಕು ಎಂದು ಸರ್ಕಾರ ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಆದೇಶ ನೀಡಿದೆ. ಎಸ್ಎಲ್‌ಬಿಸಿ ಕೂಡ ಮೆಗಾ ಅದಾಲತ್ ನಡೆಸಲು ಸೂಚಿಸಿದೆ ಈ ಬಗ್ಗೆ ಬ್ಯಾಂಕಿನವರು ಕಾರ್ಯಕ್ರಮ ನಡೆಸದಿದ್ದರೆ ಬ್ಯಾಂಕ್ ಮುಂದೆ ಚಳುವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದಲೇ ಕಬ್ಬು ಅರೆಯುವ ಅನುಮತಿ ಪತ್ರ ನೀಡುವ ಮೊದಲೇ ಡಿಜಿಟಲೀಕರಣ ಜಾರಿ ಮಾಡಲಿ. ಸಕ್ಕರೆ ಕಾರ್ಖಾನೆಗಳ ಒತ್ತಡಕ್ಕೆ ಮಣಿದು ರೈತರಿಗೆ ವ್ಯವಸ್ಥಿತ ವಂಚನೆ ನಡೆಸಲು ಸಹಕಾರ ನೀಡಬಾರದು. ಕಳಪೆ ರಸಗೊಬ್ಬರ ಕೀಟನಾಶಕ ಬಿತ್ತಲೆ ಬೀಜ ಮಾರಾಟ ಮಾಡುವ ಮಾರಾಟಗಾರರಿಗೆ ಜಾಮೀನು ರಹಿತ ಬಂಧನ ಮಾಡುವ ಕಠಿಣ ಕಾನೂನು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು. ಇದರಿಂದ ರೈತರಿಗೆ ಮೋಸವಾಗುವುದು ತಪ್ಪುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಜಿಲ್ಲಾ ಉಪಾಧ್ಯಕ್ಷ ಮಾರ್ಬಳಿ ನೀಲಕಂಠಪ್ಪ, ಬರಡನಪುರ ನಾಗರಾಜ್. ತಾಲೂಕು ಅಧ್ಯಕ್ಷ ವೆಂಕಟೇಶ್, ನಂಜನಗೂಡು ತಾಲೂಕು ಅಧ್ಯಕ್ಷ ವಿಜಯೇಂದ್ರ, ತಿ.ನರಸೀಪುರ ತಾಲೂಕು ಸಂಘಟನಾ ಕಾರ್ಯದರ್ಶಿ ಪ್ರದೀಪ್, ಮಹದೇವ ಇದ್ದರು.