ಪ್ರಧಾನಮಂತ್ರಿ ನರೇಂದ್ರ ಮೋದಿ ಇದೇ ಶುಕ್ರವಾರ ( ಜನವರಿ 19 ) ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಬಳಿಕ ಪ್ರಧಾನಮಂತ್ರಿ ಇದು ಮೂರನೇ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.
ಅಂದಿನ ದಿನ ಬೆಳಗ್ಗೆ 9.35ಕ್ಕೆ ಕಲಬುರಗಿ ತಲುಪಲಿರುವ ಮೋದಿ 9.40ಕ್ಕೆ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಲಿದ್ದಾರೆ. ಸೊಲ್ಲಾಪುರದಿಂದ 12.10ಕ್ಕೆ ತೆರಳಲಿರುವ ಮೋದಿ ಮಧ್ಯಾಹ್ನ 1 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣ ತಲುಪಲಿದ್ದಾರೆ.
1.05ಕ್ಕೆ ವಿಶೇಷ ವಿಮಾನದ ಮೂಲಕ ಹೊರಡಲಿರುವ ಮೋದಿ 2.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿ 2.15ಕ್ಕೆ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಭಟ್ಟರ ಮಾರನಹಳ್ಳಿಗೆ ಪ್ರಯಾಣ ಬೆಳೆಸುತ್ತಾರೆ.
ಭಟ್ಟರ ಮಾರನಹಳ್ಳಿಗೆ 2.45ಕ್ಕೆ ತಲುಪಲಿರುವ ಮೋದಿ ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ 3.45ಕ್ಕೆ ಭಟ್ಟರ ಮಾರನಹಳ್ಳಿಯಿಂದ ನಿರ್ಗಮಿಸುವ ಮೋದಿ 3.55ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ. ಬಳಿಕ 4 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ತೆರಳಲಿದ್ದಾರೆ.





