Mysore
20
overcast clouds
Light
Dark

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೈಸೂರಿನ ಉದ್ಯಮಿ ರಮೇಶ್‌ ಕಣ್ಣನ್ ಗೆ ಸ್ಥಾನ!

ಮೈಸೂರು: ಮೈಸೂರಿನ ಉದ್ಯಮಿ ರಮೇಶ್ ಕಣ್ಣನ್ ಅವರು ಇದೇ ಮೊದಲ ಬಾರಿಗೆ ವಿಶ್ವ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಮೈಸೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಕೇನ್ಸ್ ಟೆಕ್ನಾಲಜೀಸ್ ಇಂಡಿಯಾ ಕಂಪನಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಇವರು ಅಮೇರಿಕಾದ ಪೋರ್ಬ್ಸ್ ನಿಯತಕಾಲಿಕೆ ಪ್ರಕಟಿಸುವ ಬಿಲಿಯನೇರ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷ ಯಶಸ್ವಿಯಾಗಿ ನಡೆದ ಮೂರನೇ ಚಂದ್ರಯಾನ ಯೋಜನೆಗೆ ಕೇನ್ಸ್ ಟೆಕ್ನಾಲಜೀಸ್ ನೌಕೆಯ ಲ್ಯಾಂಡರ್‌ ಹಾಗೂ ರೋವರ್‌ಗೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಇಸ್ರೊಗೆ ಪೂರೈಕೆ ಮಾಡಿತ್ತು. ಅದಾದ ಬಳಿಕ ಕಂಪನಿಯ ಷೇರು ಸಾಕಷ್ಟು ಬೇಡಿಕೆ ಪಡೆದಿದೆ. ಪರಿಣಾಮವಾಗಿ ಕಂಪನಿ ಮತ್ತು ರಮೇಶ್ ಅವರ ಮಾರುಕಟ್ಟೆ ಸಂಪತ್ತು ಗಣನೀಯವಾಗಿ ಹೆಚ್ಚಳವಾಗಿದೆ.

2024ರ ಸಾಲಿನ ಫೋರ್ಬ್ಸ್ ಇಂಡೆಕ್ಸ್​ನಲ್ಲಿ ಮೊದಲ ಬಾರಿಗೆ ಸೇರ್ಪಡೆಯಾದ 25 ಭಾರತೀಯ ಬಿಲಿಯನೇರ್​ಗಳಲ್ಲಿ ರಮೇಶ್ ಕೂಡ ಒಬ್ಬರು. ಜೆಫ್ ಬೇಜೋಸ್, ಎಲಾನ್ ಮಸ್ಕ್, ಅಂಬಾನಿ, ಅದಾನಿ ಮೊದಲಾದ ದಿಗ್ಗಜರ ಸಾಲಿನಲ್ಲಿ ಇವರೂ ಇದ್ದಂತಾಗಿದೆ. ಫೋರ್ಬ್ಸ್ ಪ್ರಕಾರ ರಮೇಶ್ ಕಣ್ಣನ್ ಅವರ ಆಸ್ತಿಮೌಲ್ಯ 1.2 ಬಿಲಿಯನ್ ಡಾಲರ್ ಇದೆ. ಅಂದರೆ, ಸುಮಾರು 10,000 ಕೋಟಿ ರೂ ಮೊತ್ತದ ಶ್ರೀಮಂತರಾಗಿದ್ದಾರೆ.‌

ರಮೇಶ್‌ ಕಣ್ಣನ್, ಕೇನ್ಸ್ ಟೆಕ್ನಾಲಜೀಸ್‌ ಕಂಪನಿಯನ್ನು 1988ರಲ್ಲಿ ಸ್ಥಾಪಿಸಿದ್ದಾರೆ. ಇದೀಗ ಅವರ ಪತ್ನಿ ಸವಿತಾ ರಮೇಶ್‌ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದಾರೆ. ಈ ಕಂಪನಿಯಲ್ಲಿ ರಮೇಶ್‌ ಅವರು ಶೇ 64ರಷ್ಟು ಷೇರು ಹೊಂದಿದ್ದಾರೆ. ಕಂಪನಿಯು 2022 ರ ನವೆಂಬರ್‌ನಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿತ್ತು, ಚಂದ್ರಯಾನ-3ರ ಯಶಸ್ಸಿನ ನಂತರ ಷೇರು ಮೌಲ್ಯ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.