ಬೆಂಗಳೂರು: ನಗರದಲ್ಲಿ ಕಳೆದ ಕೆಲ ತಿಂಗಳಿನಿಂದ ವೇಗವಾಗಿ ಜನಪ್ರಿಯತೆ ಗಳಿಸಿ, ಒಂದರಿಂದ ಹಲವಾರು ಶಾಖೆಗಳನ್ನು ಹೊಂದಿದ ರಾಮೇಶ್ವರಂ ಕೆಫೆಯ ವೈಟ್‌ಫೀಲ್ಡ್‌ನ ಕುಂದಲಹಳ್ಳಿ ಶಾಖೆಯಲ್ಲಿ ಇಂದು ( ಮಾರ್ಚ್ 1 ) ನಿಗೂಢ ಸ್ಫೋಟ ಸಂಭವಿಸಿದೆ.
ಸದಾ ಕಿಕ್ಕಿರಿದ ಜನಸಂದಣಿಯಿಂದ ಕೂಡಿರುತ್ತಿದ್ದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರುವ ಈ ಅವಘಡದಲ್ಲಿ ಐದು ಮಂದಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಸ್ಫೋಟದ ತೀವ್ರತೆಗೆ ನೆರೆಯ ಜನರು ಸ್ಥಳಕ್ಕೆ ದಾವಿಸಿದ್ದು ವಿಡಿಯೊಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ವಿಡಿಯೊದಲ್ಲಿ ಮಹಿಳಾ ಗ್ರಾಹಕರು ಗಾಯಗೊಂಡು ಆಸ್ಪತ್ರೆಗೆ ತೆರಳುತ್ತಿರು್ ದೃಶ್ಯಗಳನ್ನು ಕಾಣಬಹುದಾಗಿದ್ದು, ಸದ್ಯ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಗಮಿಸಿದ್ದು, ಸ್ಫೋಟಕ್ಕೆ ಕಾರಣವೇನೆಂದು ಪರಿಶೀಲನೆ ನಡೆಸಿದ್ದಾರೆ. ಇನ್ನು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿರುವ ಪ್ರಕಾರ ಇದು ಸಿಲಿಂಡರ್ ಸ್ಫೋಟದಿಂದ ಸಂಭವಿಸಿರುವ ಅವಘಡವಲ್ಲ ಎನ್ನಲಾಗುತ್ತಿದೆ.





