ಬೆಂಗಳೂರು: ಮೈಸೂರು ಪೊಲೀಸರು ಕಲ್ಯಾಣ ಮಂಟಪ ನಿರ್ಮಿಸಿಕೊಂಡು ದಂಧೆ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ವಿಧಾನಪರಿಷತ್ ಕಲಾಪದಲ್ಲಿ ಮಾತನಾಡಿದ ಅವರು, ಮೈಸೂರು ಮಹಾರಾಜರು ಹಿಂದೆ ಪೊಲೀಸ್ ಇಲಾಖೆಗೆ ಜಾಗ ಕೊಟ್ಟಿದ್ದರು. ಆ ಜಾಗದಲ್ಲಿ ಮೈಸೂರು ಪೊಲೀಸರು ಒಂದು ಕಲ್ಯಾಣ ಮಂಟಪ ಕಟ್ಟಿದ್ದಾರೆ. ಅದರ ಅಧ್ಯಕ್ಷರು ಕಮಿಷನರ್ ಆಗಿದ್ದಾರೆ. ಅದರಲ್ಲಿ ಪೊಲೀಸರಿಗೆ ಕಡಿಮೆ ಬಾಡಿಗೆಯಿದ್ದು, ಬೇರೆಯವರಿಗೆ 2 ಲಕ್ಷ ಚಾರ್ಜ್ ಮಾಡುತ್ತಾರೆ. ಈ ಮೂಲಕ ಪೊಲೀಸರೇ ದಂಧೆಯಲ್ಲಿ ಮುಳುಗಿದ್ದಾರೆ. ಈ ಕಲ್ಯಾಣ ಮಂಟಪವನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಪ್ರತೀ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಒಂದು ವಿಶೇಷ ನಿಧಿ ಇದೆ. ಅದರ ಹಣದಲ್ಲಿ ಅವರು ಸಮುದಾಯ ಭವನ, ಶಾಲೆ ಎಲ್ಲಾ ಕಟ್ಟಿಕೊಂಡಿರುತ್ತಾರೆ. ಮೈಸೂರಿನಲ್ಲೂ ಪೊಲೀಸರು ಉತ್ತಮವಾಗಿ ಮಾಡಿಕೊಂಡಿದ್ದಾರೆ. ಪೊಲೀಸರು ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದಾರೆ ಅಂದರೆ ಅದನ್ನು ನಾನು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.





