Mysore
19
overcast clouds
Light
Dark

ಮೈಸೂರು ಮುಡಾ ಹಗರಣ: ಆಗಸ್ಟ್.‌12ರ ಬಳಿಕ ರಾಜ್ಯಪಾಲರ ನಿರ್ಧಾರ ಪ್ರಕಟ

ಬೆಂಗಳೂರು: ಮೈಸೂರು ಮುಡಾದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ.

ನಿನ್ನೆ ತಾನೇ ದೆಹಲಿಯಿಂದ ಬೆಂಗಳೂರಿಗೆ ವಾಪಸ್‌ ಆಗಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು, ಇನ್ನು ಮುಂದೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಲಿ ಆಟ ಆರಂಭಿಸುತ್ತಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಶೋಕಾಸ್‌ ನೋಟಿಸ್‌ ಮುಂದಿನ ಪ್ರಕ್ರಿಯೆ ಹೇಗಿರಲಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣಿಸುತ್ತಿವೆ ಎನ್ನಲಾಗುತ್ತಿದೆ.

ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದರೆ ಸರ್ಕಾರ ಹಾಗೂ ರಾಜಭವನದ ನಡುವೆ ರಾಜಕೀಯ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ಸಂಸತ್‌ ಅಧಿವೇಶನ ನಡೆಯುತ್ತಿದ್ದು, ಆಗಸ್ಟ್.‌12ರಂದು ಅದು ಮುಕ್ತಾಯಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಿದರೆ, ಸದನದಲ್ಲಿ ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಹೀಗಾಗಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌  ಅವರು, ಆಗಸ್ಟ್.‌12ರ ಬಳಿಕ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ ಮೂಲಕ ಸಿಎಂ ಸಿದ್ದರಾಮಯ್ಯರ ಭವಿಷ್ಯ ರಾಜ್ಯಪಾಲರ ಅಂಗಳದಲ್ಲಿ ನಿಂತಿದ್ದು, ಮುಡಾ ಪ್ರಕರಣದಿಂದ ಸರ್ಕಾರಕ್ಕೆ ಭಾರೀ ಮುಜುಗರ ಆಗಿದೆ ಎನ್ನಲಾಗುತ್ತಿದೆ.