ನವದೆಹಲಿ/ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮಾಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ವಿಮಾನಯಾನ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ದೆಹಲಿಯಲ್ಲಿ ಇಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರಿಗೆ ನೀಡಿದ ಪತ್ರದ ವಿವರ ಹೀಗಿದೆ ಎಂದು ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಬರೆದಿರುವ ಪತ್ರದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ರಾಜ್ಯ ಸರ್ಕಾರವು ದಿನಾಂಕ 6-10-2005 ರಂದು ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ನಿಯಮ ಬಿ (2) (v) ಪ್ರಕಾರ ಕಾರ್ಯನಿಯೋಜಕರು ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಅಗತ್ಯ ವಿರುವ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಯಾವುದೇ ಋಣಭಾರವಿಲ್ಲದೆ ನಿಯೋಜಿತರಿಗೆ ಉಚಿತವಾಗಿ ವರ್ಗಾಯಿಸಬೇಕು. ಅದರಂತೆ, ಅಗತ್ಯವಿರುವ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಉಚಿತವಾಗಿ ವರ್ಗಾಯಿಸಲಾಗಿದೆ. ಒಪ್ಪಂದದ ಷರತ್ತು ಬಿ 2 (VI) ಪ್ರಕಾರ, ನಿಯೋಜಿತರು ಮೈಸೂರು ವಿಮಾನ ನಿಲ್ದಾಣದ ಹೆಚ್ಚಿನ ಅಭಿವೃದ್ಧಿಯ ಬಂಡವಾಳ ವೆಚ್ಚ, ಮಾರ್ಪಾಡುಗಳು, ಬಲಪಡಿಸುವಿಕೆ ಮತ್ತು ಮೇಲ್ದರ್ಜೆಗೇರಿಸುವ ಎಲ್ಲಾ ವೆಚ್ಚಗಳನ್ನು ಭರಿಸಬೇಕು. ಅದರಂತೆ, ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ಅಗತ್ಯವಿರುವ ಬಂಡವಾಳ ಹಾಗೂ ಇನ್ನಿತರೆ ವೆಚ್ಚಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವೇ ಭರಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ, ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಅಗತ್ಯವಿರುವ 240 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರವು 319.14 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಭೂ ಸ್ವಾಧೀನ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ ಎಂದಿದ್ದಾರೆ.
ನವೆಂಬರ್ 2024 ರಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತವು(ಸಿ. ಎನ್.ಎನ್.ಎಲ್) ವಿಮಾನ ನಿಲ್ದಾಣ ವಿಸ್ತರಣೆ ಪ್ರದೇಶದಲ್ಲಿ ಎರಡು ಕಂದಕಗಳ ಮತ್ತು 7 ಕಾಲುವೆಗಳ ಸ್ಥಳಾಂತರಕ್ಕೆ ವರದಿಯನ್ನು ಸಲ್ಲಿಸಿದ್ದು, ಇದಕ್ಕೆ 70 ಕೋಟಿ ರೂ.ಗಳ ವೆಚ್ಚವಾಗಲಿದೆ. ಅಂತೆಯೇ, ಕೆ.ಪಿ.ಟಿ.ಸಿಎಲ್ ಕೂಡ ಹೈ-ಟೆನ್ಷನ್ ಲೈನ್ ಗಳ ಮತ್ತು ಚೆಸ್ಕಾಂ ಲೋ ಟೆನ್ಶನ್ ವೈರ್ ಗಳ ಮಾರ್ಗ ಬದಲಾವಣೆಗೆ 31.82 ಕೋಟಿ ರೂ.ಗಳ ಅಂದಾಜು ವೆಚ್ಚವಾಗಲಿದೆ ಎಂದು ತಿಳಿಸಿದ್ದು, ಒಟ್ಟಾರೆ ಸದರಿ ಕಾಮಗಾರಿಗೆ 101.82 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ, ರಾಜ್ಯ ಸರ್ಕಾರವು ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 240 ಎಕರೆ ಭೂ ಸ್ವಾಧೀನಕ್ಕೆ ತಗಲುವ 319.14 ಕೋಟಿ ರೂ. ವೆಚ್ಚವನ್ನು ಭರಿಸಿದ್ದು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ವಿಸ್ತರಣೆಯ ಅಂದಾಜು ವೆಚ್ಚ 101.84 ಕೋಟಿ ರೂ.ಗಳ ಯುಟಿಲಿಟಿ ಸ್ಥಳಾಂತರದ ಯೋಜನೆಯನ್ನು ರೂಪಿಸಿ ಶ್ರೀಘ್ರವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಕೋರಿದೆ ಎಂದು ಮಾಹಿತಿ ನೀಡಿದ್ದಾರೆ.





