Mysore
23
light rain

Social Media

ಸೋಮವಾರ, 12 ಜನವರಿ 2026
Light
Dark

ಕೊಲೆ ಪ್ರಕರಣ | ಪವಿತ್ರಾ ಗೌಡಗೆ ಕೊನೆಗೂ ಸಿಕ್ತು ಗುಡ್‌ ನ್ಯೂಸ್‌

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡಗೆ ಮನೆಯಿಂದ ಊಟ ತರಿಸಿಕೊಳ್ಳಲು ಅಂತಿಮವಾಗಿ ಅವಕಾಶ ಸಿಕ್ಕಿದೆ.

ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್ ಇಂದು (ಜನವರಿ 12) ನಡೆಸಿದ ವಿಚಾರಣೆಯಲ್ಲಿ ಆರೋಪಿಗಳ ಆರೋಗ್ಯದ ಹಿತದೃಷ್ಟಿಯಿಂದ ವಾರಕ್ಕೊಮ್ಮೆ ಮನೆ ಊಟ ನೀಡುವಂತೆ ಆದೇಶಿಸಿದೆ. ಪವಿತ್ರಾ ಗೌಡ ಜೊತೆಗೆ ನಾಗರಾಜ್ ಮತ್ತು ಲಕ್ಷ್ಮಣ್ ಎಂಬ ಇತರ ಆರೋಪಿಗಳಿಗೂ ಇದೇ ಸೌಲಭ್ಯ ಲಭ್ಯವಾಗಲಿದೆ.

ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪವಿತ್ರಾ ಗೌಡ ಅವರು ಜೈಲು ಊಟದಿಂದ ಚರ್ಮರೋಗ (ಸ್ಕಿನ್ ಅಲರ್ಜಿ), ಫುಡ್ ಪಾಯ್ಸನಿಂಗ್ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಆರೋಪಿಸಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಇದಕ್ಕೆ ಸಂಬಂಧಿಸಿ ಮೊದಲು ದಿನಕ್ಕೊಂದು ಬಾರಿ ಮನೆ ಊಟ ನೀಡಲು ಕೋರ್ಟ್ ಅನುಮತಿ ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಇದನ್ನು ಪ್ರಶ್ನಿಸಿ, ಇದರಿಂದ ಇತರ ಸಾವಿರಾರು ಕೈದಿಗಳು ಇದೇ ಬೇಡಿಕೆ ಇಡುವ ಸಾಧ್ಯತೆ ಇದೆ ಎಂದು ವಾದಿಸಿದ್ದರು.

ಕೋರ್ಟ್ ಈ ವಾದಗಳನ್ನು ಪರಿಗಣಿಸಿ ಆದೇಶವನ್ನು ಪರಿಷ್ಕರಿಸಿದೆ. ಈಗ ವಾರಕ್ಕೊಮ್ಮೆ ಮಾತ್ರ ಮನೆ ಊಟ ನೀಡುವಂತೆ ನಿರ್ದೇಶಿಸಿದೆ. ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾದರೆ ವೈದ್ಯರ ಸಲಹೆಯಂತೆ ಹೆಚ್ಚುವರಿ ಅವಕಾಶ ನೀಡಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದು, ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ನಟ ದರ್ಶನ್ ಎ2 ಆರೋಪಿ. ಈ ಪ್ರಕರಣದ ಟ್ರಯಲ್ ಈಗಾಗಲೇ ಆರಂಭವಾಗಿದ್ದು, ಸಾಕ್ಷಿಗಳ ವಿಚಾರಣೆ ಮುಂದುವರೆದಿದೆ. ಆದರೆ ಇಂದು ನಡೆದ ವಿಚಾರಣೆಯಲ್ಲಿ ಟ್ರಯಲ್ ಅನ್ನು ನಾಳೆ (ಜನವರಿ 13)ಗೆ ಮುಂದೂಡಲಾಗಿದೆ. ಎಲ್ಲಾ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ.
ಪವಿತ್ರಾ ಗೌಡ ಅವರ ಆರೋಗ್ಯ ಸಮಸ್ಯೆಗಳು ಮತ್ತು ಮನೆ ಊಟದ ಬೇಡಿಕೆಯು ಪ್ರಕರಣದಲ್ಲಿ ಹೊಸ ತಿರುವು ತಂದಿದೆ. ಜೈಲು ವ್ಯವಸ್ಥೆಯಲ್ಲಿ ಇಂತಹ ಸೌಲಭ್ಯಗಳು ಇತರ ಕೈದಿಗಳ ಮೇಲೆ ಪರಿಣಾಮ ಬೀರುತ್ತವೆ ಎಂಬ ಚರ್ಚೆಯೂ ಇದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಟ್ರಯಲ್ ತೀವ್ರಗೊಳ್ಳುತ್ತಿದೆ.

 

Tags:
error: Content is protected !!