Mysore
26
few clouds

Social Media

ಶನಿವಾರ, 15 ಮಾರ್ಚ್ 2025
Light
Dark

ಸರ್ವಜ್ಞನಗರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು: ಸರ್ವಜ್ಞ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಯನ್ನು ಕ್ಷೇತ್ರದ ಶಾಸಕರಾದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಪರಿಶೀಲನೆ ನಡೆಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಸರ್ವಜ್ಞ ನಗರದ ಹೆಚ್.ಆರ್.ಬಿ.ಆರ್. ಬಡಾವಣೆಯಲ್ಲಿ ನಿರ್ಮಿಸುತ್ತಿರುವ ಆಸ್ಪತ್ರೆ ಕಾಮಗಾರಿಗಳನ್ನು ಪರಿಶೀಲಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ನೂರು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ಕೂಡಿದ್ದು, ತಾಂತ್ರಿಕವಾಗಿ ಜನಸ್ನೇಹಿಯಾಗಿದೆ ಎಂಬುದನ್ನು ಸಚಿವ ಜಾರ್ಜ್ ಅವರು ಆರೋಗ್ಯ ಸಚಿವರ ಗಮನಕ್ಕೆ ತಂದರು. ಅಲ್ಲದೆ, ಆಸ್ಪತ್ರೆಗೆ ಅಗತ್ಯವಿರುವ ಯಂತ್ರೋಪಕರಣಗಳು ಮತ್ತು ಸಿಬ್ಬಂದಿಯನ್ನು ಆರೋಗ್ಯ ಇಲಾಖೆಯಿಂದ ಒದಗಿಸುವಂತೆ ಕೋರಿದರು.

ಮಾದರಿ ಆಸ್ಪತ್ರೆ ನಿರ್ಮಿಸುತ್ತಿರುವ ಸಚಿವ ಕೆ.ಜೆ.ಜಾರ್ಜ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಸಚಿವ ದಿನೇಶ್ ಗುಂಡೂರಾವ್, ಹಣಕಾಸು ಇಲಾಖೆ ಮೂಲಕ ಅಂದಾಜು ಪಟ್ಟಿ ಸಲ್ಲಿಸುವಂತೆ ತಿಳಿಸಿದರಲ್ಲದೆ, ನಂತರ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶೇಷ ತುರ್ತು ಚಿಕಿತ್ಸೆ ವಿಭಾಗ, ರ‍್ಯಾಂಪ್ ಸೌಕರ್ಯ ಹಾಗೂ ನೆಲಮಹಡಿಯಲ್ಲಿ ಕಿವಿ, ಮೂಗು, ಗಂಟಲು ಹಾಗೂ ವೈದ್ಯರ ಕೊಠಡಿಗಳು ಇರಲಿದೆ. ತೀವ್ರ ನಿಗಾ ಘಟಕ, ಡಯಾಲಿಸಿಸ್ ವಿಭಾಗ ಕೂಡ ಕ್ಷೇತ್ರದ ಜನತೆಗೆ ದೊರೆಯಲಿದೆ ಎಂದು ಸಚಿವರು ಹೇಳಿದರು.

ಈ ವೇಳೆ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು, ಸಚಿವರ ಬೆಂಬಲಿಗರು ಉಪಸ್ಥಿತರಿದ್ದರು.

Tags: