ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಬಜೆಟ್ ಪೂರ್ವಭಾವಿ ಸಭೆಗಳಿಗೆ ಅಲ್ಪಸಂಖ್ಯಾತ ಸಮುದಾಯಗಳ ಎಲ್ಲಾ ಮುಖಂಡರನ್ನು ಕರೆದು, ಇದುವರೆಗೂ ಚರ್ಚೆ ನಡೆಸದೇ ಇರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಧಕ್ಕೆ ತರುವಂತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿರುವ ಅವರು, ಈಗಾಗಲೇ ದಲಿತ ಹಾಗೂ ಹಿಂದುಳಿದ ವರ್ಗಗಳ ಅನೇಕ ಸಂಘ-ಸಂಸ್ಥೆಗಳು ಮತ್ತು ನಾಯಕರೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳನ್ನು ಆಲಿಸಿ, ಬಜೆಟ್ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೀರಿ. ಆದರೆ, ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಮುಖಂಡರೊಂದಿಗೆ ಸಭೆ ನಡೆಸದೇ ಸಚಿವರೊಬ್ಬರೊಬ್ಬರೇ ಎಲ್ಲಾ ಅಲ್ಪಸಂಖ್ಯಾತ ಧ್ವನಿ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ದೂರಿದರು.
ಇನ್ನು ಅಲ್ಪಸಂಖ್ಯಾತರಲ್ಲಿ ಮುಸ್ಲಿಂ. ಕ್ರೈಸ್ತ, ಜೈನ, ಬೌದ್ಧ, ಪಾರ್ಸಿ, ಸಿಖ್ ಸಮುದಾಯಗಳೂ ಇವೆ. ಆದರೆ, ಇತ್ತೀಚೆಗೆ ಆಳುವವರು ಇದನ್ನು ಮರೆತು ಹೋಗಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಗೆ ಅಲ್ಪಸಂಖ್ಯಾತ ಸಮುದಾಯಗಳ ಎಲ್ಲಾ ಮುಖಂಡರು, ಸಂಘ-ಸಂಸ್ಥೆಗಳನ್ನು ಕರೆಯಬೇಕು. ಈ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.





