Mysore
22
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಮುಡಾ ಹಗರಣ: ನಾನು ತನಿಖೆಗೆ ಹೆದರುವುದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್‌ ಅನ್ನು ಹೈಕೋರ್ಟ್‌ ಎತ್ತಿಹಿಡಿದ ಬೆನ್ನಲ್ಲೇ ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಆದೇಶ ಹೊರಡಿಸಿದೆ.

ಈ ಆದೇಶ ಹೊರಬೀಳುತ್ತಿದ್ದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ನಿನ್ನೆ ಹೈಕೋರ್ಟ್‌ 17ಎ ಅನ್ವಯ ತನಿಖೆ ನಡೆಸುವಂತೆ ಆದೇಶಿಸಿತ್ತು. ಇಂದು ಜನಪ್ರತಿನಿಧಿಗಳ ಕೋರ್ಟ್‌ ಪಿಸಿ ಕಾಯ್ದೆ 7ಸಿ ಅಡಿ ತನಿಖೆ ನಡೆಸುವಂತೆ ಆದೇಶಿಸಿ ತೀರ್ಪು ನೀಡಿದೆ. ತೀರ್ಪಿನ ಅನ್ವಯ ಮೈಸೂರು ಲೋಕಾಯುಕ್ತಗೆ ತನಿಖೆ ನಡೆಸಲು ಹೇಳಿದೆ. ಹೀಗಾಗಿ ತನಿಖೆ ಎದುರಿಸಲು ನಾವು ತಯಾರಿದ್ದೇವೆ ಎಂದರು.

ಜನಪ್ರತಿನಿಧಿ ಕೋರ್ಟ್‌ನ ಆದೇಶವನ್ನು ನಾನು ಇನ್ನೂ ಓದಿಲ್ಲ. ಕೇರಳದಿಂದ ಬಂದಮೇಲೆ ಆದೇಶದಲ್ಲಿ ಏನಿದೆ ಎಂದು ನೋಡುತ್ತೇನೆ. ಕೋರ್ಟ್‌ ಆದೇಶದ ದೊರಕಿದ ನಂತರ ವಕೀಲರೊಂದಿಗೆ ಚರ್ಚಿಸಿ ಆ ನಂತರ ಸುಪ್ರೀಂಕೋರ್ಟ್‌ಗೆ ಮೇಲನ್ಮವಿ ಸಲ್ಲಿಸುತ್ತೇನೆ ಎಂದು ಹೇಳಿದರು.

ಹೈಕೋರ್ಟ್‌ ತೀರ್ಪು ಬಂದ ನಂತರ ನಿನ್ನೆಯೂ ಹೇಳಿದ್ದೆ, ಈಗಲೂ ಹೇಳುತ್ತೇನೆ ನಾನು ತನಿಖೆಗೆ ಹೆದರುವುದಿಲ್ಲ. ದೂರುದಾರರು ಮೈಸೂರಿನವರಾಗಿದ್ದಾರೆ. ಹೀಗಾಗಿ ಅಲ್ಲಿಯೇ ತನಿಖೆ ನಡೆಯುತ್ತದೆ. ಇಂದು ಕೋರ್ಟ್‌ ನೀಡುವ ಆದೇಶದ ಪ್ರತಿಯನ್ನು ಪಡೆದುಕೊಂಡ ನಂತರ ಮುಂದಿನ ನಿರ್ಧಾರದ ಬಗ್ಗೆ ನಾಳೆ(ಸೆ.26) ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ರಚಿಸಿರುವ ತನಿಖಾ ಆಯೋಗಕ್ಕೆ ಕೋರ್ಟ್‌ ಯಾವುದೇ ತಡೆ ನೀಡಿಲ್ಲದ ಕಾರಣ ಆ ತನಿಖೆ ಎಂದಿನಂತೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:
error: Content is protected !!