ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ಅನ್ನು ರದ್ದುಗೊಳಿಸಲಾಗಿದೆ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಈ ಕುರಿತು ಇಂದು(ಮಾರ್ಚ್.7) ಹೈಕೋರ್ಟ್‌ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವೂ ಕಾಯ್ದಿರಿಸಿದ ಆದೇಶವನ್ನು ಅಂತಿಮಗೊಳಿಸಿ ಇಡಿ ತನಿಖೆಯನ್ನೇ ರದ್ದುಗೊಳಿಸುವಂತೆ ಹೇಳಿದೆ. ಇಡಿ ದಾಖಲಿಸಿದ ಇಸಿಐಆರ್ ಅನ್ನು ರದ್ದುಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೆ ನೀಡಿದ್ದ ಸಮನ್ಸ್ ಅನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ತೀರ್ಪು ಪ್ರಕಟಿಸಿ ಪಾರ್ವತಿ ಸಿದ್ದರಾಮಯ್ಯ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ಬಿಗ್ ರಿಲೀಫ್ ನೀಡಿದೆ.
ಏನಿದು ಪ್ರಕರಣ?
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹಾಗೂ ಮುಡಾದಿಂದ ದಾಖಲೆ ಕಡತಗಳನ್ನು ತೆಗೆದುಕೊಂಡು ಹೋಗಿರುವ ಹಿನ್ನೆಲೆಯಲ್ಲಿ ಸಚಿವ ಬೈರತಿ ಸುರೇಶ್ ಅವರಿಗೆ ಇ.ಡಿ. ತನಿಖಾ ಸಂಸ್ಥೆಯೂ ವಿಚಾರಣೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
ಈ ಸಮನ್ಸ್ ಅನ್ನು ಪ್ರಶ್ನಿಸಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವೂ ತೀರ್ಪಿನ ಆದೇಶವನ್ನು ಕಾಯ್ದಿರಿಸಿತ್ತು. ಆದರೆ ಇಂದು ಆ ಆದೇಶವನ್ನು ಪ್ರಕಟಿಸಿದ್ದು, ಇ.ಡಿ. ತನಿಖೆ ಸಂಸ್ಥೆ ನೀಡಿರುವ ಸಮನ್ಸ್ ಅನ್ನು ರದ್ದುಗೊಳಿಸಲಾಗಿದೆ ಎಂದು ತೀರ್ಪು ಪ್ರಕಟಿಸಿದೆ.
ಇನ್ನು ಮುಡಾ ಪ್ರಕರಣದಲ್ಲಿ ಪಾರ್ವತಿ ಸಿದ್ದರಾಮಯ್ಯ ಅವರ ಪರ ಹಿರಿಯ ವಕೀಲ ಸಂದೇಶ ಚೌಟ ವಾದ ಮಂಡಿಸಿದರೆ, ಬೈರತಿ ಸುರೇಶ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು.





