Mysore
22
broken clouds
Light
Dark

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಸೋಮವಾರ(ಸೆ.9) ಮತ್ತೆ ಮುಂದೂಡಿದೆ.

ಮುಂದಿನ ವಿಚಾರಣೆಯನ್ನು ಸೆಪ್ಟಂಬರ್‌ 12ರಂದು ನಿಗದಿ ಮಾಡಲಾಗಿದ್ದು, ಅಲ್ಲಿಯವರೆಗೂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್‌ ಸಿಕ್ಕಂತಾಗಿದೆ.

ನ್ಯಾಯಾಧೀಶ ಎಂ.ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸುತ್ತಿದ್ದು, ಇಂದು ಸಹ ಧೀರ್ಘ ವಿಚಾರಣೆ ನಡೆಯಿತು.

ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೆಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಪ್ರಾಸಿಕ್ಯೂಷನ್‌ಗೆ ಪೊಲೀಸರು ಅನುಮತಿ ಕೇಳಬಹುದು. ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು ಎಂದು ಹೇಳಿ ಲಲಿತಾ ಕುಮಾರಿ ಪ್ರಕರಣವನ್ನು ಉಲ್ಲೇಖಿಸಿದರು.

ಬಳಿಕ ಸಿಎಂ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು, ತಾವು ಸೆಪ್ಟಂಬರ್‌ 12ರಂದು ವಾದಿಸುವುದಾಗಿ ಕೋರ್ಟ್‌ಗೆ ಮನವಿ ಮಾಡಿದರು. ಹೀಗಾಗಿ ಕೋರ್ಟ್‌, ಏನೇ ಇದ್ದರೂ ಅಂದೇ ವಾದ ಮಂಡಿಸಿ ಕೊನೆಗೊಳಿಸಬೇಕು ಎಂದು ವಿಚಾರಣೆಯನ್ನು ಸೆಪ್ಟಂಬರ್‌ 12ಕ್ಕೆ ಮುಂದೂಡಿದೆ.