ಹುಬ್ಬಳ್ಳಿ: ರಾಜ್ಯ ಸರ್ಕಾರ ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಈ ಪ್ರಕರಣವನ್ನು ಮುಲಾಜಿಲ್ಲದೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಂಸದ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು(ಮಾರ್ಚ್.13) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಯಾರನ್ನೋ ರಕ್ಷಿಸಲು ಹೋಗಿ ಸರ್ಕಾರ ಗೊಂದಲಕ್ಕೆ ಸಿಲುಕಿದೆ. ಕೇಸ್ ಅನ್ನು ಸರ್ಕಾರ ನಿರ್ವಹಿಸುತ್ತಿರುವ ರೀತಿ ನೋಡಿದರೇ ಸರ್ಕಾರ ವಿಫಲವಾಗಿದೆ ಎಂಬುದು ಎದ್ದು ಕಾಣುತ್ತದೆ. ಅಲ್ಲದೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಒತ್ತಡಕ್ಕೆ ಮಣಿದು ಹೇಳಿಕೆಗಳನ್ನು ನೀಡಬಾರದು. ಹೀಗಾಗಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದ ನಾಯಕರು ಈ ಬಗ್ಗೆ ಒಬ್ಬೊಬರೂ ಒಂದೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇನ್ನು ಗೋಲ್ಡ್ ಸ್ಮಗ್ಲಿಂಗ್ ಸಂಬಂಧ ಮಾಧ್ಯಮಗಳಲ್ಲಿ ಕೆಲವರ ಹೆಸರು, ಸಚಿವರ ಕೈವಾಡ ಹಾಗೂ ರಾಜಕಾರಣಿಗಳ ಬಗ್ಗೆ ವರದಿ ಬರುತ್ತಿದೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರನ್ನ ನೇಮಿಸಿ ಅವರಿಗೆ ಸರ್ಕಾರಿ ವೇತನ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಕಾರ್ಯಕರ್ತರಿಗೆ ಸರ್ಕಾರಿ ವೇತನ ನೀಡುವ ಮೂಲಕ ಹಗಲು ದರೋಡೆ ಮಾಡಿ, ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದೆ. ಅಲ್ಲದೇ ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೇನು ಕೆಲಸ? ಮಂತ್ರಿಗಳು ಮತ್ತು ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರಾ? ಎಂದು ಪ್ರಶ್ನಿಸಿದರು.