ಬೆಂಗಳೂರು: ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನುಗಳನ್ನು ಸಮೀಕ್ಷೆ ಮಾಡಿ ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಫಸಲ್ ಭೀಮಾ ಯೋಜನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ರೈತರ ಪರವಾದ ಯೋಜನೆಯಾಗಿದ್ದು, ಈ ಯೋಜನೆಯನ್ನು ಇನ್ನಷ್ಟು ರೈತ ಪರ ಹಾಗೂ ಪಾರದರ್ಶಕವಾಗಿ ಜಾರಿ ಮಾಡಬೇಕು. ಈ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಬರ, ಪ್ರವಾಹದಂತಹ ಅನೇಕ ಕಾರಣಗಳಿಂದ ಬೆಳೆ ಹಾನಿಗೊಳಗಾದಾಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದೆ. ಅದರ ಬದಲು ಪ್ರತಿ ರೈತರ ಜಮೀನಿನ ಸರ್ವೆ ನಂಬರ್ ಆಧಾರದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿದರೆ ಬೆಳೆಹಾನಿಗೊಳಗಾದ ಎಲ್ಲಾ ರೈತರೂ ವಿಮಾ ಪರಿಹಾರ ಪಡೆಯಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.





