Mysore
25
overcast clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಡಿಸಿಎಂ ಡಿಕೆಶಿ ತಮ್ಮ ವ್ಯಕ್ತಿತ್ವದ ವಿರುದ್ಧವಾಗಿ ಸಹನೆ ಪ್ರದರ್ಶಿಸುತ್ತಿದ್ದಾರೆ: ಸಂಸದ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭದ್ರತೆ, ಒಳ ಬೇಗುದಿ ಇದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವ್ಯಕ್ತಿತ್ವದ ವಿರುದ್ಧವಾಗಿ ಸಹನೆ ಪ್ರದರ್ಶಿಸುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಜನವರಿ.8) ಡಿನ್ನರ್‌ ಪಾಲಿಟಿಕ್ಸ್‌ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭದ್ರತೆ. ಒಳ ಬೇಗುದಿ ಆರಂಭದಿಂದಲೂ ಇದೆ. ಆದರೆ ಇದು ನಿರೀಕ್ಷಿತ ಬೆಳವಣಿಗೆ ಇದರಲ್ಲಿ ಬಹಳ ಮುಖ್ಯ ವಿಚಾರ ಏನೆಂದರೆ ಡಿಕೆಶಿ ಅವರ ಸಹನೆ ಹಾಗೂ ಅವರು ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಬಹಳ ಸಹನೆ ಪ್ರದರ್ಶನ ಮಾಡುತ್ತಿದ್ದಾರೆ. ಅದು ಅವರ ಮುತ್ಸದ್ಧಿತನವೋ? ಹೈಕಮಾಂಡ್ ಸೂಚನೆಯೋ ನೋಡಬೇಕು. ಡಿಕೆಶಿ ಅವರ ಸಹನೆ ಕಟ್ಟೆ ಯಾವಾಗ ಒಡೆಯುತ್ತದೆ ಅನ್ನುವುದು ಮುಖ್ಯವಾಗುತ್ತದೆ‌. ಅದಕ್ಕೆ ಪೂರಕವಾಗಿ ಪ್ರಕ್ರಿಯೆ ಆರಂಭವಾಗಿದ್ದು, ಕಾಲ ಯಾವಾಗ ಬರುತ್ತದೆ ಎಂದು ನೋಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಮೇಲಿನ ಕಮೀಷನ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಎಲ್ಲದರಲ್ಲಿ ಕಮಿಷನ್ ಭ್ರಷ್ಟಾಚಾರ ನಡೆಸುತ್ತಿದ್ದು, ಇದರಿಂದ ಜನ ಹೈರಾಣಾಗಿದ್ದಾರೆ. ಅಬಕಾರಿ ಗುತ್ತಿಗೆದಾರರು, ಪಿಡಬ್ಲ್ಯುಡಿ, ನೀರಾವರಿ ಇಲಾಖೆಯ ಗುತ್ತಿಗೆದಾರರು ಅನುಭವಿಸುತ್ತಿದ್ದಾರೆ. ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಮಧ್ಯಮ ವರ್ಗದವರು ಹೈರಾಣಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಒಂದು ಸೈಟ್ ತೆಗೆದುಕೊಳ್ಳಲಾಗದ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಎಸ್‌ಸಿ, ಎಸ್ಟಿ ಬೋರ್‌ವೆಲ್‌ಗಳಿಗೂ ಕಮಿಷನ್‌ ಪಡೆಯುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಇದನ್ನು ಸಿಎಂ ನಿರಾಕರಿಸಿರಬಹುದು, ಅವರಿಗೆ ಹಿಡಿತ ಕೈ ತಪ್ಪಿರಬಹುದು, ಅವರೇ ಭಾಗಿಯಾಗಿರಬಹುದು ಅಥವಾ ಅದರ ಬಗ್ಗೆ ಮಾತನಾಡಿದರೆ ಅಧಿಕಾರಕ್ಕೆ ಧಕ್ಕೆ ಬರುತ್ತದೆ ಎನ್ನುವ ಭಾವನೆ ಮೂಡಿದೆ. ಸರ್ಕಾರದಲ್ಲಿ ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಪರ್ಸೆಂಟ್ ಕಮಿಷನ್ ಇದೆ. ಇಷ್ಟೇ ಇದೆ ಅಂತ ಹೇಳಲು ಆಗುವುದಿಲ್ಲ, ಆದರೆ ಕುಮಾರಸ್ವಾಮಿಯವರು ಹೇಳಿರುವ ಪ್ರಕಾರ ಭ್ರಷ್ಟಾಚಾರ ಮಿತಿಮೀರಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಡಿನ್ನರ್‌ ಮೀಟಿಂಗ್‌ಗಳು ಅವರ ಆಂತರಿಕ ವಿಚಾರ, ಈ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

Tags:
error: Content is protected !!