Mysore
21
overcast clouds
Light
Dark

ಮಂತ್ರಾಲಯದಲ್ಲೂ ಮೂಲರಾಮನ ಮೂರ್ತಿ ಅನಾವರಣ!

ಮಂತ್ರಾಲಯ: ಜನವರಿ ೨೨ರಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ಲೋಕಾರ್ಪಣೆ ಹಾಗೂ ಬಾಲ ರಾಮನ ಪ್ರತಿಷ್ಠಾಪನೆಯಾಗುತ್ತಿದ್ದು, ಅದೇ ದಿನ ಶ್ರೀ ಕ್ಷೇತ್ರ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮೂಲ ದೇವರಾದ ಶ್ರಿಮನ್‌ ಮೂಲರಾಮದೇವರ ರಪ್ರತಿಮೆ ಅನಾವರಣಗೊಳ್ಳಿದೆ.

ಈ ಮೂಲಕ ಅಯೋಧ್ಯೆ ರಾಮ ಮಂದಿರ ಹಾಗೂ ಮಂತ್ರಾಲಯ ಮೂಲ ರಾಮ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಒಂದಕ್ಕೊಂದು ತಳಕು ಹಾಕಿಕೊಂಡಿದೆ.

ಜ.೨೨ ರಂದು ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸಾಂಕೇತಿಕವಾಗಿ ಮೂಲರಾಮ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಮೂರ್ತಿ ಹಾಗೂ ಕಟ್ಟಡಗಳ ಕಾಮಗಾರಿ ಸಂಪೂರ್ಣವಾದ ಬಳಿಕ ಪ್ರತಿಮೆಯನ್ನು ಶಾಸ್ತ್ರೋಕ್ತವಾಗಿ ಲೋಕಾರ್ಪಣೆ ಮಾಡಲಾಗುವುದಾಗಿ ಶ್ರೀಮಠದ ಆಡಳಿತ ಮಂಡಳಿ ತಿಳಿಸಿದೆ.

೫೪ ಅಡಿ ಎತ್ತರದ ಭವ್ಯ ರಾಮ ಪ್ರತಿಮೆ
ಮಂತ್ರಾಲಯದಲ್ಲಿ ನೆಲೆನಿಲ್ಲಲಿರುವ ಮೂಲರಾಮ ದೇವರ ಪ್ರತಿಮೆ ಸುಮಾರು ೨೫೦ ಟನ್‌ ತೂಕ ೫೪ ಅಡಿ ಎತ್ತರವಿದೆ. ಈಗಾಗಲೆ ಪ್ರತಿಮೆಯ ಕೆಲಸ ೯೦ ಭಾಗ ಸಂಪೂರ್ಣವಾಗಿದ್ದು, ಇನ್ನೇನು ಕೊನೆ ಹಂತದ ಕೆಲಸ ಬಾಕಿ ಉಳಿದಿದೆ. ಕಾಮಗಾರಿ ಸಂಪೂರ್ಣವಾದ ಬಳಿಕ ಹೋಮ-ಹವನ, ವೇದಮಂತ್ರಗಳೊಂದಿಗೆ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಆಯೋಧ್ಯೆ ರಾಮನಿಗೂ ಮಂತ್ರಾಲಯದ ಶ್ರೀಮಠದಲ್ಲಿ ಪೂಜಿಸಲ್ಪಡುವ ಮೂಲರಾಮ ದೇವರಿಗೂ ನಂಟು ಇದೆ. ದೇವಲೋಕದಲ್ಲಿ ಪ್ರತಿಮಾ ಮಾಧ್ಯಮದಲ್ಲಿ ಬ್ರಹ್ಮದೇವರು ಭಗವಂತನನ್ನು ಆರಾಧನೆ ಮಾಡಬೇಕು ಎಂದು ಸಂಪಲ್ಪಿಸಿ ವಿಶ್ವಕರ್ಮರಿಂದ ಶುದ್ಧ ತಾಮ್ರದ ಪ್ರತಿಮೆಯನ್ನು ಮಾಡಿಸಿದರು. ಸಕಲ ಸಲ್ಲಕ್ಷಣಗಳಿಂದ ಕೂಡಿದ ಪ್ರತಿಮೆಯನ್ನು ಬ್ರಹ್ಮದೇವರು ಪೂಜಿಸಿದರು. ಕಾಲಕ್ರಮೇಣ ಎಲ್ಲಾ ದೇವಾನು ದೇವತೆಗಳು, ಋಷಿ ಮುನಿಗಳು ಈ ಮೂರ್ತಿಯನ್ನು ಪೂಜಿಸಿದ್ದಾರೆ. ಹಾಗೇ ಅಯೋಧ್ಯೆಗೂ ಈ ಮೂರ್ತಿ ಬಂದಿದೆ. ರಾಮನ ಪೂರ್ವಜರೂ ಈ ಮೂರ್ತಿಯನ್ನು ಪೂಜಿಸಿದ್ದಾರೆ. ಸ್ವತಃ ರಾಮನೂ ಈ ಮೂರ್ತಿಯನ್ನು ಪೂಜೆ ಮಾಡಿದ ನಂತರ ಈ ಮೂರ್ತಿ ಮೂಲರಾಮನಾಗಿ ಪರ್ವರ್ತನೆಯಾಗಿದ್ದು. ಈ ರೀತಿ ಶ್ರೀ ಮಠದ ಮೂಲರಾಮರಿಗೂ ಆಯೋಧ್ಯೆ ರಾಮರಿಗೂ ಅವಿನಾಭಾವ ಸಂಬಂಧವಿದೆ.
– ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳು
ಪೀಠಾಧಿಪತಿಗಳು, ಶ್ರೀ ರಾಘವೇಂದ್ರಸ್ವಾಮಿಗಳ ಮಠ, ಮಂತ್ರಾಲಯ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ