Mysore
21
overcast clouds

Social Media

ಗುರುವಾರ, 08 ಜನವರಿ 2026
Light
Dark

ದೇವರಾಜ ಅರಸು ಅವರಿಗೆ ಸಿದ್ದರಾಮಯ್ಯ ಸಾಟಿ ಇಲ್ಲ: ಎಂಎಲ್‌ಸಿ ಎಚ್.ವಿಶ್ವನಾಥ್‌

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸುತ್ತಿಗೆ ಹಿಡಿದುಕೊಂಡು ಕೂತಿದೆ. ಯಾವಾಗ ಹೊಡೆಯುತ್ತದೆಯೋ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೆಲವು ಕಾರಣಗಳಿಂದ ಕಾಂಗ್ರೆಸ್ ಹೈಕಮಾಂಡ್ ವಿಧಿಯಿಲ್ಲದೆ ಸಿದ್ದರಾಮಯ್ಯ ನಾಯಕತ್ವವನ್ನು ಒಪ್ಪಿಕೊಂಡಿದೆ. ಹಾಗೆಂದು ಅವರನ್ನು ಪೂರ್ಣ ಅವಧಿಗೆ ನೀವೇ ಸಿಎಂ ಎಂದು ಹೇಳಿಲ್ಲ. ಸಮಯ ಸಂದರ್ಭ ಬಂದಾಗ ಹೊಡೆಯುತ್ತಾರೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷ ಎಂದರೇನೆ ಅಹಿಂದ ಕಾಂಗ್ರೆಸ್. ವಾಸ್ತವ ಹೀಗಿರುವಾಗ ಸಿದ್ದರಾಮಯ್ಯ ಯಾವ ಅಹಿಂದ ನಾಯಕ ಎಂದು ಪ್ರಶ್ನೆ ಮಾಡಿದ ಅವರು, ಸಿದ್ದರಾಮಯ್ಯನವರಿಗೆ ಕೃತಜ್ಞತೆ ಎಂಬುದೇ ಇಲ್ಲ. ತಮನ್ನು ಬೆಳೆಸಿದವರನ್ನೇ ಮುಗಿಸುವುದು ಅವರ ರಾಜಕಾರಣದ ಅಜೆಂಡಾ. ಈವರೆಗೂ ಅವರು ಯಾವ ನಾಯಕತ್ವವನ್ನು ಬೆಳೆಸಿದ್ದಾರೆ. ಅಧಿಕಾರದ ಲಾಲಸೆ-ಸ್ವಾರ್ಥ ತುಂಬಿ ತುಳುಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷಕ್ಕೆ ಯಾವಾಗಲೂ ಬೆಂಬಲವಾಗಿ ನಿಂತಿದ್ದಾರೆ. ಈ ಸಮುದಾಯ ಸಿದ್ದರಾಮಯ್ಯನವರ ನಾಯಕತ್ವದ ಕಾರಣಕ್ಕಾಗಿ ಮತ ಹಾಕುತ್ತಿಲ್ಲ. ನಾಳೆ ಸಿದ್ದರಾಮಯ್ಯ ಇಲ್ಲದಿದ್ದರೂ ಈ ಸಮುದಾಯದ ಮೊತ್ತ ಬಂದೇ ಬರುತ್ತದೆ. ಕೆಲವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿಎಂ ಅವರ ನಾಯಕತ್ವವನ್ನು ಗುಣಗಾನ ಮಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಮುರಿದು ಹಾಕಿದ್ದಾರೆ ಎಂದು ಎಲ್ಲೆಡೆ ಗುಣಗಾನವಾಗುತ್ತಿದೆ. ಅರಸು ಮಾಡಿದ ದಾಖಲೆಗಳನ್ನು ಯಾರಾದರೂ ಮುರಿಯಲು ಸಾಧ್ಯವೇ? ಕರ್ನಾಟಕದಲ್ಲಿ ಮತ್ತೆ ಅಂತಹ ನಾಯಕತ್ವ ಹುಟ್ಟಿ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಎಲ್ಲಿಯ ದೇವರಾಜ ಅರಸು, ಎಲ್ಲಿಯ ಸಿದ್ದರಾಮಯ್ಯ, ಅಧಿಕಾರವನ್ನೇ ತ್ಯಾಗ ಮಾಡಿದವರು ಅರಸು. ಅಧಿಕಾರಕ್ಕಾಗಿ ಇನ್ನೊಬ್ಬರನ್ನು ತುಳಿದವರು ಸಿದ್ದರಾಮಯ್ಯ ಇಬ್ಬರಿಗೂ ಹೋಲಿಕೆ ಮಾಡುವುದೇ ಮಹಾ ಮೂರ್ಖತನ. ಇದು ಆನೆ ಮತ್ತು ಇರುವೆಯಷ್ಟೆ ವ್ಯತ್ಯಾಸ ಎಂದು ಕಿಡಿಕಾರಿದರು.

Tags:
error: Content is protected !!