ಬೆಂಗಳೂರು: ಜಾತಿ ಆಧರದ ಮೇಲೆ ವಿಷ ಕಾರುವ ಬಿಜೆಪಿಗರು ಇದೀಗ ತಮ್ಮ ತಮ್ಮಲ್ಲೇ ಬಡಿದಾಡಿಕೊಳ್ಳುತ್ತಿದ್ದಾರೆ. ಆದರೆ, ಅವರು ಮಕ್ಕಳೆಲ್ಲಾ ವಿದೇಶದಲ್ಲಿ ಓದುತ್ತಾರೆ. ಬಡವರ ಮಕ್ಕಳು ಬಡಿದಾಡುಕೊಂಡು ಇರಬೇಕು ಎಂಬುದೇ ಅವರ ಸಂಸ್ಕೃತಿ ಎಂದು ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಜನರೇ ನಿಮಗೆ ಬುದ್ಧಿ ಕಲಿಸುತ್ತಾರೆ. ಭಗವದ್ಗೀತೆ ಮೇಲೆ ಚರ್ಚೆ ಮಾಡೋಣ ಬನ್ನಿ. ನಮ್ಮ ಧರ್ಮವನ್ನು ಪ್ರೀತಿಸಬೇಕು, ಅನ್ಯ ಧರ್ಮಗಳನ್ನು ಗೌರವಿಸಬೇಕು. ಆದರೆ ನಿಮ್ಮಲ್ಲೇ ದೊಡ್ಡ ಕಂದಕ ಶುರುವಾಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಡಾ.ಜಿ.ಪರಮೇಶ್ವರ್ರವರ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಸಂಸತ್‍ನಲ್ಲಿ ದಾಳಿ ಮಾಡಿದಂಥವರಿಗೆ ಪಾಸ್ ಕೊಟ್ಟವರು ನೀವು. ನಿನ್ನೆ ಪ್ರತಾಪ್ ಸಿಂಹ ಅವರ ಮೇಲೆ ಎಫ್‍ಐಆರ್ ಹಾಕಲಾಗಿದೆ. ಪರಮೇಶ್ವರ್ರವರ ದಮ್ಮು, ತಾಕತ್ತಿನ ಬಗ್ಗೆ ಮಾತನಾಡುತ್ತೀರಾ? ಎಂದು ಖಾರವಾಗಿ ಪ್ರಶ್ನಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಗೃಹಸಚಿವರು ಚೆನ್ನಾಗಿಯೇ ನಿರ್ವಹಿಸುತ್ತಿದ್ದಾರೆ. ಆದರೆ ವಿನಾಕಾರಣ ಪ್ರತಿಪಕ್ಷದ ನಾಯಕ ಅಶೋಕ್ ಆರೋಪಿಸುತ್ತಿದ್ದಾರೆ. ಮತ್ತೆ ಇವರನ್ನೆಲ್ಲಾ ಜನರೇ ಸೋಲಿಸುತ್ತಾರೆ. ನಮ್ಮದು ಶಿಸ್ತಿನ ಪಕ್ಷ, ಬಿಜೆಪಿ ಅಶಿಸ್ತಿನ ಪಕ್ಷವಾಗಿದೆ ಎಂದರು.
ರತ್ನಗಂಬಳಿ ಹಾಕಲು ನಾನ್ಯಾರು?
ಸಂಸದ ಡಾ.ಸುಧಾಕರ್ ಕಾಂಗ್ರೆಸ್‍ಗೆ ಬರುವ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಪಕ್ಷದ ಹಿರಿಯರಿಗೆ ಬಿಟ್ಟದ್ದು. ಸ್ವಾಗತ ಮಾಡಲು ನಾನ್ಯಾರು? ನಾನೊಬ್ಬ ಸಾಮಾನ್ಯ ಮನುಷ್ಯ. ಅವರಿಗೆ ರತ್ನಗಂಬಳಿ ಹಾಕಲು ನಾನ್ಯಾರು? ನಮ್ಮ ನಾಯಕರು ಆ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ದತ್ತುಪುತ್ರ ಇದ್ದಂತೆ. ಹೀಗಾಗಿ ನನಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ದೇವಸ್ಥಾನವಿದ್ದಂತೆ
ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಕೆಪಿಸಿಸಿ ದೇವಸ್ಥಾನವಿದ್ದಂತೆ. ನಾನೊಬ್ಬ ಕಸ ಗುಡಿಸುವವನಿದ್ದಂತೆ, ಹೈಕಮಾಂಡ್ ಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡಲಿ ಎಂದರು.





