ಬಳ್ಳಾರಿ: ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಸರ್ಕಾರ ಸೇಡಿನಿಂದ ಲಾಠಿ ಚಾರ್ಜ್ ಮಾಡಿಸಿದೆ ಎಂದು ಶಾಸಕ ಜನಾರ್ಧನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬಳ್ಳಾರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬ್ರಿಟೀಷರ ಮಾದರಿಯಲ್ಲಿ ಭಯಾನಕವಾಗಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದೆ. ವಯಸ್ಸು, ಹಿರಿಯರು, ಕಿರಿಯರು ಎನ್ನುವುದನ್ನು ನೋಡದೇ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ದೂರಿದರು.
ಇನ್ನು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಬಂಧನದಲ್ಲಿಟ್ಟಿದ್ದಾರೆ. ಹೋರಾಟಕ್ಕೆ ಬೆಂಬಲ ನೀಡಿದ್ದ ಪ್ರತಿಪಕ್ಷದ ನಾಯಕರನ್ನೂ ಬಂಧನ ಮಾಡಿದ್ದಾರೆ. ಅಮಾಯಕ ಜನರನ್ನು ಅಟ್ಟಾಡಿಸಿ ಮನಬಂದಂತೆ ಹೊಡೆದಿದ್ದಾರೆ. ಬ್ರಿಟಿಷರಂತೆ ಕೆಟ್ಟ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು ಹೋರಾಟದ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬಂದು ಭರವಸೆ ಕೊಡುವ ಕೆಲಸ ಮಾಡಬೇಕಿತ್ತು. ಆದರೆ ಅವರು ಮಾಡಿದ್ದೇನು? ಎಂದು ಪ್ರಶ್ನೆ ಮಾಡಿದರು.
ಸಿಎಂ ಸಿದ್ದರಾಮಯ್ಯ ಇಡೀ ಪಂಚಮಸಾಲಿ ಸಮಾಜಕ್ಕೆ ಮಾತ್ರ ಅಲ್ಲ, ಇಡೀ ಸಮಾಜಕ್ಕೆ ಕ್ಷಮೆ ಕೇಳುವ ಕೆಲಸ ಮಾಡಬೇಕಿದೆ. ಇದಕ್ಕೆ ಸಿಎಂ ಫುಲ್ ಸ್ಟಾಪ್ ಇಡಬೇಕಿದೆ. ಸ್ವಾಮೀಜಿಯವರನ್ನು ಭೇಟಿ ಮಾಡಿ, ಸಾಂತ್ವನ ಹೇಳಬೇಕು. ಮುಂದೆ ಈ ರೀತಿ ಆಗೋದಿಲ್ಲ ಎಂದು ಭರವಸೆ ನೀಡಬೇಕು ಎಂದು ಆಗ್ರಹಿಸಿದರು.





