Mysore
19
overcast clouds
Light
Dark

ನೈತಿಕತೆ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಜನಾರ್ಧನ ರೆಡ್ಡಿ

ಬೆಂಗಳೂರು: ನೈತಿಕತೆ ಇದ್ದರೆ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.

ಬೆಳಿಗ್ಗೆ ಎದ್ದರೆ ನೈತಿಕತೆ ಹಾಗೂ ಕಾನೂನಿನ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಈ ಕ್ಷಣಕ್ಕೆ ರಾಜೀನಾಮೆ ಕೊಡಬೇಕಿತ್ತು. ಅವರು ಮಾಡಿರುವ ತಪ್ಪುಗಳನ್ನು ಮರೆಮಾಚಿದ್ದಾರೆ. ನಾನು ತಪ್ಪೇ ಮಾಡಿಲ್ಲ ಅನ್ನುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ನ್ಯಾಯಯುತವಾಗಿ ಹಣ ದುಡಿದಿದ್ದೇನೆ. ನಿಮ್ಮ ಹಾಗೆ ಅಕ್ರಮವಾಗಿ ಹಣ ದುಡಿದಿಲ್ಲ ಎಂದು ಸಿಎಂ ಸಿದ್ದು ವಿರುದ್ಧ ಕಿಡಿಕಾರಿದರು.

ನನ್ನ ಮೇಲೆ ಬಿಜೆಪಿಯವರು ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಹೇಳುತ್ತೀರಿ. ಇದು ಇಲ್ಲಸಲ್ಲದ ಆರೋಪವೇ ಎಂದು ಪ್ರಶ್ನೆ ಮಾಡಿದರು.

ನಿಮಗೆ ಈಗಾಗಲೇ ವಯಸ್ಸಾಗಿದೆ. ಈ ಇಳಿವಯಸ್ಸಿನಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಈ ಹಿಂದೆ ನಮಗೆ ತನಿಖೆ ಮಾಡೋಕೆ ಆಗಲ್ಲ. ರಾಜೀನಾಮೆ ಕೊಡಿ ಅಂತ ಹೇಳಿದ್ದೀರಿ. ಈಗ ಯಾವ ಮುಖ ಹೊತ್ತು ಮಾತಾಡುತ್ತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇಷ್ಟೆಲ್ಲಾ ಬೆಳವಣಿಗೆಗಳು ಆದ ಮೇಲೆ ಸಿಎಂ ಆಗಿ ಮುಂದುವರಿಯಲು ಸಿದ್ದರಾಮಯ್ಯಗೆ ಸಾಧ್ಯವಿಲ್ಲ. ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಬನ್ನಿ ಎಂದು ಆಗ್ರಹಿಸಿದರು.