ಬೆಂಗಳೂರು: ಬಿಜೆಪಿಯಿಂದ ಶಾಸಕ ಯತ್ನಾಳ್‌ರನ್ನು ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿರುವ ಬಿಜೆಪಿ ಶಿಸ್ತು ಸಮಿತಿಯ ಕ್ರಮವನ್ನು ನಾನು ಸಂಭ್ರಮಿಸಲಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಯನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿರುವ ಕ್ರಮವಾಗಿರುತ್ತದೆ. ಪಕ್ಷದ ಬೆಳವಣಿಗೆಯಲ್ಲಿನ ಕಹಿ ಘಟನೆಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರುಗಳನ್ನು ಹೇಳಿಕೊಂಡಿಲ್ಲ. ಯಾರೊಂದಿಗೂ ದುಃಖ ತೋಡಿಕೊಂಡಿಲ್ಲ. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ಸಂಭ್ರಮಿಸಲಾರೆ. ಬದಲಾಗಿ ಈ ಬೆಳವಣಿಗೆಯನ್ನು ದುರದೃಷ್ಟಕರ ಎಂದು ದುಃಖಿಸುತ್ತೇನೆ.
ಎಲ್ಲರೂ ಸೇರಿ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಿ ಪಕ್ಷವನ್ನು ಮನ್ನಡೆಸೋಣ. ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಸಮೃದ್ದ ಕರ್ನಾಟಕವನ್ನು ಕಟ್ಟುವ ನಿಟ್ಟಿನಲ್ಲಿ ವಿಕಸಿತ ಭಾರತದ ಸಂಕಲ್ಪ ಹೊತ್ತ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಹೆಗಲು ಕೊಡೋಣ. ಪಕ್ಷದ ವರಿಷ್ಠರ ನಿರೀಕ್ಷೆಯ ಗುರಿ ತಲುಪೋಣ ಎಂದು ಬರೆದುಕೊಂಡಿದ್ದಾರೆ.





