ವೃಂದ ಮತ್ತು ನೇಮಕಾತಿ ಕರಡು ನಿಯಮಾವಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಅಷ್ಟೇ
ಬೆಂಗಳೂರು : ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಎನ್ನುವ ವಾಟ್ಸ್‌ಆಪ್ ಮೆಸೇಜ್‌ಗಳು ಸುಳ್ಳಾಗಿದ್ದು, ಸಾರ್ವಜನಿಕರು ಈ ರೀತಿಯ ಪ್ರಕಟಣೆಗಳನ್ನು ನಂಬಿ ಮೋಸಹೋಗದಂತೆ ಎಚ್ಚರವಹಿಸುವಂತೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ತಗೆದುಕೊಂಡ ನಿರ್ಣಯದ ಹಿನ್ನಲೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಪ್ರತ್ಯೇಕವಾಗಿ ಸರ್ಕಾರದ ಅಧಿಸೂಚನೆ ಮೂಲಕ ಕರಡು “ಕರ್ನಾಟಕ ಸಣ್ಣ ನೀರಾವರಿ ಇಲಾಖೆ ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು 2025” ನ್ನು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಈ ನಿಯಮಾವಳಿಗಳಲ್ಲಿ ಇಲಾಖೆಗೆ ಅಗತ್ಯವಿರುವ ಸಿಬ್ಬಂದಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಈ ಕರಡು ನಿಯಮಾವಳಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಸ್ವೀಕರಿಸುವ ಉದ್ದೇಶದಿಂದ 15 ದಿನಗಳ ಕಾಲ ಕಾಲಾವಕಾಶ ನೀಡಲಾಗಿರುತ್ತದೆ. ಆದರೆ, ಇದೇ ಅಧಿಸೂಚನೆಯನ್ನು ಮುಂದಿಟ್ಟುಕೊಂಡು ನೇಮಕಾತಿ ಪ್ರಕ್ರಿಯೆ ಎನ್ನುವಂತೆ ಬಿಂಬಿಸಲಾಗುತ್ತಿರುವ ಹಲವಾರು ಮೇಸೇಜ್‌ಗಳು ಹರಿದಾಡುತ್ತಿವೆ. ಈ ಮೆಸೇಜ್‌ಗಳು ಸುಳ್ಳಾಗಿದ್ದು ಯಾವುದೇ ನೇಮಕಾತಿಯನ್ನು ನಡೆಸಲು ಅರ್ಜಿಯನ್ನು ಆಹ್ವಾನಿಸಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸಾರ್ವಜನಿಕರು ಈ ರೀತಿಯ ಪ್ರಕಟಣೆಗಳನ್ನು ನಂಬಬಾರದು. ಹಾಗೆಯೇ, ನಂಬಿ ಮೋಸಹೋಗಬಾರದು ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.