ಮಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕುರಿತು ಸಚಿವ ಜಮೀರ್ ಅಹಮದ್ ನೀಡಿರುವ ಹೇಳಿಕೆಯು ಉಪಚುನಾವಣೆಯ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ಕೆಲವೊಮ್ಮೆ ಆಡು ಭಾಷೆಯಲ್ಲಿ ಮಾತನಾಡುತ್ತಾರೆ. ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನಾನು ಚನ್ನಪಟ್ಟಣದಲ್ಲಿದ್ದೆ. ಅದೇನು ಅಂತಹ ದೊಡ್ಡ ವಿಚಾರವೇನಲ್ಲ. ಈಗಾಗಲೇ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಸಾರ್ವಜನಿಕವಾಗಿ ಮಾತನಾಡಬೇಕಾದರೆ ನಾವು ಸ್ವಲ್ಪ ತಾಳ್ಮೆಯಿಂದ ಮಾತನಾಡಬೇಕು ಎಂದು ಸಲಹೆ ನೀಡಿದರು.
ಇನ್ನು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ” ಹುಚ್ಚಾಸ್ಪತ್ರೆಯಲ್ಲಿರಬೇಕಾದವರು ಕ್ಯಾಬಿನೆಟ್‌ನಲ್ಲಿದ್ದಾರೆ ” ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಜ್ಞಾನೇಂದ್ರರಿಗೆ ಬುದ್ಧಿ ಭ್ರಮಣೆಯಾಗಿದೆ. ಅವರಿಗೆ ಮಾಜಿ ಸಚಿವರು ಎಂಬ ಪರಿಜ್ಞಾನ ಇಲ್ಲದೇ ಒಬ್ಬ ಹಾಲಿ ಸಚಿವರ ವಿರುದ್ಧ ಅತ್ಯಂತ ಲಘುವಾಗಿ ಮಾತನಾಡಿದ್ದಾರೆ. ಮೊದಲು ಅವರ ಮೇಲಿರುವ ಆರೋಪಗಳಿಗೆ ಉತ್ತರ ನೀಡಲಿ ಎಂದು ತಿರುಗೇಟು ನೀಡಿದರು.





