ಬೆಂಗಳೂರು: ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಪಡೆದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ತಜ್ಞ ವೈದ್ಯರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ.
ನಗರದಲ್ಲಿ ಇಂದು ಕಲಬುರ್ಗಿಯ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರೊಂದಿಗೆ ನಡೆದ ಸಂವಾದದಲ್ಲಿ ಸಚಿವರು ಈ ಮಾತು ಹೇಳಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ತಜ್ಞರಾಗಿ ಕರ್ತವ್ಯ ನಿರ್ವಹಿಸಲು ಅತ್ಯಂತ ಕಡಿಮೆ ಅವಧಿ ಸಿಗುತ್ತದೆ ಇದನ್ನು ವಿಸ್ತರಿಸಬೇಕು ಎಂದು ಹಲವಾರು ವೈದ್ಯರು ಸಂವಾದದಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಪರಿಣಿತಿ ಹೊಂದಿದ ವೈದ್ಯರನ್ನು ಉಳಿಸಿಕೊಳ್ಳುವ ಸಂಬಂಧ ನಿವೃತ್ತಿ ವಯಸ್ಸು ವಿಸ್ತರಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಜತೆಗೆ, ಕಲಬುರ್ಗಿ ಜಯದೇವ ಆಸ್ಪತ್ರೆಗೆ ರೊಬೋಟಿಕ್ ಶಸ್ತ್ರಚಿಕಿತ್ಸಾ ಸೌಲಭ್ಯ ಕಲ್ಪಿಸಲು ಹೆಚ್ಚುವರಿ ಹಣ ಮಂಜೂರು ಮಾಡಲಾಗುತ್ತದೆ. ಮಕ್ಕಳ ವಿಭಾಗಕ್ಕೆ ಶಸ್ತ್ರಚಿಕಿತ್ಸಾ ಘಟಕ, ಪ್ರತ್ಯೇಕ ಸಂಶೋಧನಾ ವಿಭಾಗ, ಆಸ್ಪತ್ರೆ ವೈದ್ಯಕೀಯ ದಾಖಲೆಗಳ ಡಿಜಿಟಲೀಕರಣ ವ್ಯವಸ್ಥೆ ಒದಗಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.