ಬೆಂಗಳೂರು: ಹಣದ ಕೊರತೆ ಇರುವ ಕಾರಣದಿಂದ ರಾಜ್ಯದ ನಾಲ್ಕು ಬಸ್ ನಿಗಮಗಳು ಶೇಕಡಾ.15ರಷ್ಟು ಪ್ರಯಾಣ ದರ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮತ್ತು ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಎನ್‌ಡಬ್ಲುಕೆಆರ್‌ಟಿಸಿ) ಅಧಿಕಾರಿಗಳು ದರ ಪರಷ್ಕರಣೆಗೆ ಒತ್ತಾಯಿಸಿದ್ದಾರೆ.
ಸಾರಿಗೆ ನಿಗಮಗಳು ಕಳೆದ ಆರು ತಿಂಗಳುಗಳಿಂದ ಪ್ರಯಾಣ ದರ ಹೆಚ್ಚಳಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುತ್ತಲೇ ಬಂದಿವೆ. ಈ ಕುರಿತು ಸರ್ಕಾರದ ಜೊತೆ ಚರ್ಚೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ನಿಗಮಗಳಲ್ಲಿ ಹಣದ ಕೊರತೆಗೆ ಸರ್ಕಾರದಿಂದ ಬರಬೇಕಾದ ಬಾಕಿ ವೇತನವು ಒಂದು ಕಾರಣ ಎಂದು ಡಿಸೆಂಬರ್.31ರಂದು ಆರ್‌ಟಿಸಿ ಯೂನಿಯನ್‌ಗಳ ಸದಸ್ಯರು ಮುಷ್ಕರ ಮಾಡಲು ನಿರ್ಧರಿಸಿದ್ದರು.
2014ರಲ್ಲಿ ಬಿಎಂಟಿಸಿ, 2020 ರಲ್ಲಿ ಕೆಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲುಕೆಆರ್‌ಟಿಸಿ ದರ ಪರಿಷ್ಕರಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸರ್ಕಾರವು ದರ ಹೆಚ್ಚಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇಂಧನ, ಬಸ್‌ನ ಬಿಡಿ ಭಾಗಗಳ ಬೆಲೆ ಹೆಚ್ಚಾಗಿದ್ದು ಉತ್ಪಾದಿತ ಆದಾಯದ ಶೇ. 45ಕ್ಕಿಂತ ಹೆಚ್ಚು ಡೀಸೆಲ್‌ಗೆ ಖರ್ಚು ಮಾಡಲಾಗುತ್ತಿದೆ. ಉಳಿದಂತೆ ಉದ್ಯೋಗಿಗಳ ಸಂಬಳಕ್ಕೂ ಆದಾಯದ ಹಣವನ್ನು ನೀಡಲಾಗುತ್ತಿದೆ. ಇದರಿಂದ ನಿಗಮಗಳು ನಷ್ಟದಲ್ಲಿವೆ ಎಂದು ಅಧಿಕಾರಗಳು ತಿಳಿಸಿದ್ದಾರೆ.
ಸರ್ಕಾರವೂ ಕೂಡ ಪ್ರಯಾಣ ದರ ಏರಿಕೆಗೆ ಸಕರಾತ್ಮಕವಾಗಿ ಸ್ಪಂದಿಸಿದ್ದು ಈ ಬಾರಿ ಪರಿಷ್ಕರಣೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.





