ಬೆಂಗಳೂರು: ಬಿಜೆಪಿಯವರು ಪ್ರತಿಯೊಂದು ಪ್ರಕರಣವನ್ನು ಸಿಬಿಐಗೆ ಕೊಡಿ ಎನ್ನುತ್ತಾರೆ. ಸ್ವತಃ ಸಿಬಿಐ ಅವರೇ ನೀವು ನಮಗೆ ಕೇಸ್ ಕೊಡಬೇಡಿ ಎಂದು ಪತ್ರ ಬರೆದಿದ್ದಾರೆ. ಅದು ಬಿಜೆಪಿಯವರಿಗೆ ಮರೆತು ಹೋಗಿರಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಏಪ್ರಿಲ್.6) ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ವಹಿಸುವಂತೆ ಬಿಜೆಪಿ ಆಗ್ರಹದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಹನಿಟ್ರ್ಯಾಪ್ ವಿಚಾರ ಸೇರಿದಂತೆ ಪ್ರತಿಯೊಂದು ಪ್ರಕರಣವನ್ನು ಸಿಬಿಐ ಕೊಡಿ ಎಂದು ಹೇಳುತ್ತಾರೆ. ಅಂತೆಯೇ ಇದನ್ನು ಸಿಬಿಐಗೆ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಸಿಬಿಐ ಅವರೇ ನೀವು ನಮಗೆ ಕೇಸ್ ಕೊಡಬೇಡಿ ಎಂದು ಪತ್ರ ಬರೆದಿದ್ದಾರೆ. ಒಂದು ವೇಳೆ ನೀವೂ ನಮಗೆ ಕೇಸ್ ನೀಡಿದರೆ ಅದಕ್ಕೆ ಸಿಬ್ಬಂದಿ ಒದಗಿಸಬೇಕು. ಸಾರಿಗೆ ವ್ಯವಸ್ಥೆ ಮಾಡಿ ಅದರ ಶುಲ್ಕವನ್ನು ನೀವೇ ಪಾವತಿಸಬೇಕು. ಅಲ್ಲದೇ ನಾವು ಸ್ವತಂತ್ರವಾಗಿ ತನಿಖೆ ಮಾಡಲು ಆಗುವುದಿಲ್ಲ, ಕರ್ನಾಟಕ ಪೊಲೀಸರ ಸಹಾಯ ಪಡೆದೇ ತನಿಖೆ ನಡೆಸುತ್ತೇವೆ. ಎಂದು ಬರೆದಿದ್ದಾರೆ. ಅದನ್ನು ಬಿಜೆಪಿಯವರು ಮರೆತುಬಿಟ್ಟಿದ್ದಾರೆಂದು ಕಾಣುತ್ತದೆ ಹಾಗಾಗಿ ಅವರಿಗೆ ಪತ್ರ ತಲುಪಿಸಿ ಕೊಡುತ್ತೇನೆ ಎಂದು ಟಾಂಗ್ ನೀಡಿದ್ದಾರೆ.
ಬಿಜೆಪಿಯವರಿಗೆ ಸಾವಿನ ಮನೆಯಲ್ಲಿ ರಾಜಕೀಯ ಮಾಡಿ ಅಭ್ಯಾಸವಾಗಿದೆ. ಅವರು ಪ್ರಕರಣದ ಸತ್ಯಾಂಶವನ್ನು ನೋಡುವುದಿಲ್ಲ. ಸುಮ್ಮನೆ ದುರುದ್ದೇಶದಿಂದ ರಾಜಕೀಯ ಮಾಡುತ್ತಾರೆ. ಇದೇ ರಾಜಕೀಯವನ್ನು ಕಲಬುರ್ಗಿಯಲ್ಲಿ ಮಾಡಿದ್ದಾರೆ. ವಿನಯ್ ಡೆತ್‌ನೋಟ್‌ನಲ್ಲಿ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಮಂಥರ್ ಗೌಡ ಹೆಸರಿದೆಯಾ? ಅದು ವಾಟ್ಸ್‌ಆಪ್ ಸಂದೇಶನಾ? ಇವರು ಸುಮ್ಮನೆ ಹೈಕಮಾಂಡ್ ಮನವೊಲಿಸಲು ಹಾಗೂ ಇವರ ಅಸ್ತಿತ್ವ ತೋರಿಸಿಕೊಳ್ಳಲು ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ಕೇಸ್ ಸಾಬೀತಾಗಿಲ್ಲ. ಯಾವುದಾದರೂ ಒಂದು ಕೇಸ್ ಅನ್ನು ಸಾಬೀತು ಮಾಡಿದ್ದಾರಾ? ಬಿಜೆಪಿಯವರು ಯಾರು ಕಾಳಜಿ ವಹಿಸಿದ್ದಾರೆ. ನೂರಾರು ಕಾರ್ಯಕರ್ತರ ಪಟ್ಟಿಗೆ ಈ ಹೆಸರು ಒಂದು ಸೇರ್ಪಡೆಯಾಗಿದೆ. ಬಿಜೆಪಿಯವರ ರಾಜಕೀಯ ಅಸ್ತಿತ್ವವೇ ಇಷ್ಟು ಎಂದು ವಾಗ್ದಾಳಿ ನಡೆಸಿದ್ದಾರೆ.