ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಎಲ್ಲಾ ಸಚಿವರ ಕಾರ್ಯವೈಖರಿ ಬಗ್ಗೆ ವರದಿ ಕೇಳಿದ್ದು, ನಾನು ಸಹ ನನ್ನ ಇಲಾಖೆ ವರದಿಯನ್ನು ನೀಡಿದ್ದೇನೆ ಅವರು ವರದಿ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಡಿ.4) ಹೈಕಮಾಂಡ್‌ನಿಂದ ಸಚಿವರ ವರದಿ ಕೇಳಿರುವ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದ ಹೈಕಮಾಂಡ್ ಎಲ್ಲಾ ಇಲಾಖೆಯ ಸಚಿವರ ವರದಿ ಕೇಳಿದೆ. ವರದಿ ಪಡೆಯುವ ಅಧಿಕಾರ ಹೈಕಮಾಂಡ್‌ಗೆ ಇದೆ. ವರದಿ ನೀಡಿದ ಮೇಲೆ ಹೈಕಮಾಂಡ್ ನಾಯಕರು ಅದನ್ನು ಪರಿಶೀಲಿಸುತ್ತಾರೆ. ಹೀಗಾಗಿ ಹೈಕಮಾಂಡ್ ವರದಿ ಕೇಳಿರೋದರಲ್ಲಿ ಏನು ತಪ್ಪಿಲ್ಲ ಎಂದಿದ್ದಾರೆ.
ಪಕ್ಷದಿಂದ ಕೊಟ್ಟಿರೋ ಭರವಸೆಗಳನ್ನು ಈಡೇರಿಸಲು ಆಯಾಯ ಇಲಾಖೆಯಲ್ಲಿ ಜವಾಬ್ದಾರಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದು ಶಾಸಕರಿಗೆ ಸಚಿವ ಸ್ಥಾನ ನೀಡಿರವುದು. ಅದನ್ನು ಬಿಟ್ಟು ಸಚಿವರು ಕಾರಿನಲ್ಲಿ ಓಡಾಡಿಕೊಂಡು ಇರುವುದಕ್ಕೆ ಅಲ್ಲ. ಕಾಂಗ್ರೆಸ್ ಪಕ್ಷದ ಹೆಸರು, ವರ್ಚಸ್ಸು ವೃದ್ದಿ ಮಾಡೋ ಜವಾಬ್ದಾರಿ ಶಾಸಕರು ಹಾಗೂ ಮಂತ್ರಿಗಳ ಮೇಲಿದೆ.ನಮಗೆ ನೀಡಿರುವ ಸಚಿವ ಸ್ಥಾನದ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಿದ್ದಾರಾ ಅಥವಾ ಇಲ್ಲವಾ ಎಂದು ತಿಳಿಯಲು ವರದಿ ಕೇಳಿದ್ದಾರೆ ಎಂದು ಹೇಳಿದ್ದಾರೆ.





