ಬೆಂಗಳೂರು : ಗ್ರಾಮಗಳಿಗೆ ನುಗ್ಗಿ ಬೆಳೆಹಾನಿ, ಜೀವಹಾನಿ ಮಾಡುತ್ತಿರುವ ಆನೆಗಳ ಸೆರೆಗೆ ಆದೇಶ ನೀಡಿದ್ದು, ಈಗಾಗಲೇ 2 ಆನೆ ಸೆರೆ ಹಿಡಿಯಲಾಗಿದೆ. ಇನ್ನೂ ಎರಡು ಆನೆಗಳನ್ನು ಸೆರೆ ಹಿಡಿಯಲು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ವಿಕಾಸಸೌಧದಲ್ಲಿಂದು ಚಿಕ್ಕಮಗಳೂರು ಜಿಲ್ಲೆ ಖಾಂಡ್ಯ ಹೋಬಳಿಯ ಗ್ರಾಮಸ್ಥರ ನಿಯೋಗವು ಕಾಡಾನೆ ಸೆರೆ, ಕಾಡುಕೋಣ ಮತ್ತು ಕಾಡುಹಂದಿಗಳ ಉಪಟಳ ನಿಯಂತ್ರಿಸುವಂತೆ ಕೋರಿ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದ ಕೆಲವು ಭಾಗದಲ್ಲಿ ಕಾಡಿನ ಹೊರಗೆ 100ಕ್ಕೂ ಹೆಚ್ಚು ಆನೆಗಳಿದ್ದು, ಅವುಗಳಿಗೆ ಕಾಫಿ ತೋಟ ಯಾವುದು, ಅರಣ್ಯ ಯಾವುದು ಎಂದು ತಿಳಿಯುವುದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಆನೆಧಾಮ ನಿರ್ಮಿಸಲು 53 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ, ಆನೆ ಕಂದಕ ನಿರ್ವಹಣೆ, ಟೆಂಟಕಲ್ ಫೆನ್ಸಿಂಗ್, ಸೌರ ತಂತಿ ಬೇಲಿ ಅಳವಡಿಕೆ ಮಾಡಲಾಗಿದೆ, ಸಮಗ್ರ ಕಮಾಂಡ್ ಸೆಂಟರ್ ಮಾಡಿ ಸಾರ್ವಜನಿಕರಿಗೆ ವನ್ಯಜೀವಿ ಸಂಚಾರದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. 12 ಕೋಟಿ ರೂ.ವೆಚ್ಚದಲ್ಲಿ ನಿಮ್ಮ ಭಾಗದಲ್ಲಿ ರೈಲ್ವೆ ಹಳಿ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಕಾಡುಕೋಣ, ಕಾಡೆಮ್ಮೆ ನಿಯಂತ್ರಣಕ್ಕೆ ಇಲಾಖೆಯ ಸಿಬ್ಬಂದಿ ತರಬೇತಿ ಪಡೆದು ಬಂದಿದ್ದು, ಕಾಡುಪ್ರಾಣಿಗಳಿಗಾಗಲೀ, ಕಾಡಿನಂಚಿನ ಗ್ರಾಮಸ್ಥರಿಗಾಗಲೀ ತೊಂದರೆ ಆಗದಂತೆ ಹಾಗೂ ಜೀವ, ಜೀವನೋಪಾಯ ಎರಡನ್ನೂ ಉಳಿಸಲು ಪ್ರಕೃತಿ ಪರಿಸರ ರಕ್ಷಣೆಯೊಂದಿಗೆ ಸುಸ್ಥಿರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.
ಕಾಡಿನಂಚಿನ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆ ನಡೆಸುವ ಮೂಲಕ ಗ್ರಾಮಗಳ ಮೂಲಸೌಲಭ್ಯ ಮತ್ತು ಗ್ರಾಮೀಣ ಜನರ ಕೌಶಲ್ಯವರ್ಧನೆಯಂತಹ ಕಾರ್ಯಕ್ರಮಗಳನ್ನೂ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಶೃಂಗೇರಿ ಶಾಸಕ ರಾಜೇಗೌಡ, ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಅಂಶುಮಂತಗೌಡ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.





