ನವದೆಹಲಿ: ದೆಹಲಿಯಲ್ಲಿಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಸಚಿವರು ಹಾಗೂ ಎಲ್ಲಾ ಸಂಸದರ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಸುದೀರ್ಘ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಮೇಕೆದಾಟು ಯೋಜನೆ, ಭದ್ರಾ ಯೋಜನೆ, ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ರಾಜ್ಯದ ಹಣ, ರಾಯಚೂರಿಗೆ ಏಮ್ಸ್ ನೀಡುವ ಸಂಬಂದ ಸುದೀರ್ಘ ಚರ್ಚೆ ನಡೆಸಿದರು.
ಇದರ ಜೊತೆಗೆ ಬಾಕಿ ಉಳಿದ ಬರ ಪರಿಹಾರ, ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಮನವಿ ಮಾಡಿ ಕೂಡಲೇ ಅಂಗೀಕರಿಸಿ ಪಶ್ಚಿಮಘಟ್ಟದ ಜನರಿಗೆ ನೆಮ್ಮದಿ ಒದಗಿಸುವ ಸಂಬಂಧ ಚರ್ಚೆ ನಡೆಸಿದರು.
ಇನ್ನೂ ಸಭೆಯಲ್ಲಿ ರಾಜ್ಯ ರೈಲ್ವೆ ಸಂಪರ್ಕದಲ್ಲಿ ತೀರ ಹಿಂದುಳಿದ ಬಗ್ಗೆ ಚರ್ಚೆ ನಡೆಸಲಾಗಿದ್ದು, 15ನೇ ಹಣಕಾಸು ಆಯೋಗದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಸಂಸದರಿಗೆ ಒತ್ತಾಯಿಸಿದರು.
ಸಭೆಯಲ್ಲಿ ಕಳಸಾ ಬಂಡೂರಿ ಯೋಜನೆಗೆ ಎಲ್ಲರ ಒಪ್ಪಿಗೆ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಇನ್‌ಪುಟ್ ಸಬ್ಸಿಡಿ ಸಮರ್ಪಕವಾಗಿ ಒದಗಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಪಾರ್ಲಿಮೆಂಟಿನ ಒಳಗೆ ಹಾಗೂ ಹೊರಗೆ ನೀವೆಲ್ಲಾ ಧ್ವನಿಯೆತ್ತಬೇಕು ಎಂದು ಎಲ್ಲಾ ಸಂಸದರಿಗೆ ಸಭೆಯಲ್ಲೇ ಒತ್ತಾಯ ಮಾಡಿದರು.
ಬಳಿಕ ಎಲ್ಲಾ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.