ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮೇಷ್ಟ್ರು ಮನೆ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ಪಲ್ಟಿಯಾಗಿದ್ದು, ಮಗು ಸೇರಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾದ ಗಿಡ್ಡನಹಳ್ಳಿಯಿಂದ ಯಲಹಂಕದಲ್ಲಿ ಇಂದು(ಫೆಬ್ರವರಿ.24) ನಡೆಯುತ್ತಿದ್ದ ನಾಮಕರಣ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಆದರೆ ಅಪಘಾತದ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಗು ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಬಸ್ಸಿನಲ್ಲಿ ಒಟ್ಟು 25 ಮಂದಿ ಪ್ರಯಾಣಿಸುತ್ತಿದ್ದರು. ಆ ಗಾಯಾಳುಗಳನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.





