ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಸಂಬಂಧಿಸಿದಂತೆ ಈಗಾಗಲೇ ನಮ್ಮ ಮೆಟ್ರೋ ದರ ಏರಿಕೆಗಾಗಿ ಪ್ರಸ್ತಾವನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದೇವೆ. ಅನುಮತಿ ಬಂದ ಬಳಿಕ ನಿರ್ಧಾರ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೆಟ್ರೋ ಟಿಕೆಟ್ ದರ ಏರಿಕೆಯ ಪ್ರಸ್ತಾವನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಕೇಂದ್ರದಿಂದ ಉತ್ತರ ಬರಬೇಕು. ಉತ್ತರ ಬಂದ ಮೇಲೆ ನಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದೇ ವೇಳೆ ಕಾವೇರಿ ನೀರಿನ ದರ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರಕ್ಕೆ ಬೆಲೆ ಏರಿಕೆಯ ಪ್ರಸ್ತಾವನೆಯನ್ನು ಜಲಮಂಡಳಿಯವರು ಸಲ್ಲಿಸಿದ್ದಾರೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಬೆಲೆ ಏರಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಇನ್ನು ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗೆ ಬಿಡಿಎ ನಿರ್ಮಾಣ ಮಾಡುತ್ತಿರುವ ಲೂಪ್ ಪ್ಲೈಓವರ್ ಕಾಮಗಾರಿಯನ್ನು ಏಪ್ರಿಲ್ ವೇಳೆಗೆ ಮುಗಿಸುವಂತೆ ಸೂಚನೆ ನೀಡಿದರು.





