ವಿಜಯಪುರ: ಕರ್ನಾಟಕದ ಗಂಡಸರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಮತ ಹಾಕಬಾರದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆ ನೀಡಿದ್ದಾರೆ.
ಈ ಬಗ್ಗೆ ವಿಜಯಪುರ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಸ್ ಟಿಕೆಟ್ ಪ್ರಯಾಣದ ದರವನ್ನು 15% ಹೆಚ್ಚಳ ಮಾಡುವ ಮೂಲಕ ರಾಜ್ಯದ ಗಂಡಸರಿಗೆ ತುಂಬಾ ಅನ್ಯಾಯ ಮಾಡಿದೆ. ಹೆಣ್ಣು ಮಕ್ಕಳಿಗೆ ಉಚಿತ ನೀಡಿ, ಗಂಡು ಮಕ್ಕಳಿಗೆ ಹೆಚ್ಚಿನ ದುಡ್ಡು ಹಾಕಿದ್ದಾರೆ. ಇದು ಹೆಣ್ಣು ಮಕ್ಕಳಿಗೂ ಅನ್ಯಾಯವಾಗುವಂತೆ ಕಾಣುತ್ತಿದೆ. ನಿಮ್ಮ ಗಂಡು ಮಕ್ಕಳನ್ನು ರಕ್ಷಣೆ ಮಾಡಬೇಕು ಅಂದರೆ ಮುಂದಿನ ಬಾರಿ ನಡೆಯುವ ಚುನಾವಣೆಯಲ್ಲಿ ಹೆಣ್ಣು ಮಕ್ಕಳು ಸಹ ಕಾಂಗ್ರೆಸ್‌ಗೆ ಮತ ನೀಡಬಾರದು ಎಂದು ಕರೆ ನೀಡಿದರು.
ಇನ್ನು ಕಲಬುರಿ ಪ್ರತಿಭಟನೆಗೆ ವಿಜಯೇಂದ್ರ ಭಾಗಿ ಆಗದ ವಿಚಾರಕ್ಕೆ ಪ್ರತಿಕ್ರಿಯಿಸದ ಅವರು, ವಿಜಯೇಂದ್ರ ನೇತೃತ್ವದಲ್ಲಿ ಎಲ್ಲಾ ಕಡೆ ಪ್ರತಿಭಟನೆ ಎಂದು ಹೇಳಿಕೊಂಡಿದ್ದರು. ಆದರೆ ರಾಜ್ಯಾದ್ಯಂತ ಪ್ರತಿಭಟನೆ ಇದ್ದ ಕಾರಣ ಪಾಪ ಅವರು ಯಾವ ಕಡೆ ಹೋಗುತ್ತಾರೆ. ಬಾಣಂತಿಯರ ಸಾವು ಪ್ರಕರಣದ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದರಿಂದ ಸಾಮೂಹಿಕ ನಾಯಕತ್ವ ಹೇಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.
ಇನ್ನು ವಿಜಯೇಂದ್ರ ಹಾಗೂ ಆರ್.ಅಶೋಕ್ ಮಧ್ಯೆ ಹೊಂದಾಣಿಕೆ ಕೊರತೆ ವಿಚಾರವಾಗಿ ಮಾತನಾಡಿದ ಅವರು, ಹಾಗೇನಿಲ್ಲ, ಆರ್.ಅಶೋಕ್ ಅವರು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಅವರ ಬಗ್ಗೆ ಯಾವ ಆರೋಪಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಚುನಾವಣಾ ಪ್ರಕ್ರಿಯೆ ಇದ್ದೆ ಇರುತ್ತದೆ. ಕೇಂದ್ರದ ಹೈಕಮಾಂಡ್ ಆಯ್ಕೆಯೇ ಅಂತಿಮ. ರಾಜ್ಯ ಮತ್ತು ಕೇಂದ್ರದ ಹಿರಿಯರು ಸಹಮತದೊಂದಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರು ಅರ್ಹರೋ ಅವರನ್ನೇ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.





