ಮೈಸೂರು : ಪಾಂಡವಪುರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾಗವಹಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಶ್ರೀ ಜನಜಾಗರಣ ಟ್ರಸ್ಟ್ (ರಿ) ಇದರ ಪಾಂಡವಪುರ ಘಟಕ ವತಿಯಿಂದ ಪಾಂಡವಪುರದಲ್ಲಿ ನಿರ್ಮಿಸಿರುವ ನೂತನ ಮಣಿಕರ್ಣಿಕ ನಿಲಯ (ಆರೆಸ್ಸೆಸ್ ಕಾರ್ಯಾಲಯ) ಹೊಸ ಕಟ್ಟಡದ ಗಣಹೋಮ ಮತ್ತು ಶ್ರೀ ರಾಮತಾರಕ ಹೋಮ ಕಾರ್ಯಕ್ರಮದಲ್ಲಿ ಭಾಗವಸಿರುವ ಬಗ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ. ಎಸ್ ಪುಟ್ಟರಾಜು ಹಾಗೂ ಸಂಘದ ಪ್ರಮುಖರು ಉಪಸ್ಥಿತರಿದ್ದರು ಎಂದು ಉಲ್ಲೇಖಿಸಿರುವ ದರ್ಶನ್ ಪುಟ್ಟಣ್ಣಯ್ಯ, ಕಾರ್ಯಕ್ರಮದ ಕೆಲವು ಫೋಟೊಗಳನ್ನೂ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ರೈತ ನಾಯಕ, ಮಾಜಿ ಶಾಸಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯರ ಪುತ್ರರಾಗಿರುವ ದರ್ಶನ್ ಪುಟ್ಟಣ್ಣಯ್ಯ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ದರ್ಶನ್ ರ ಫೇಸ್ ಬುಕ್ ಪೋಸ್ಟ್ ಗೆ ಕಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ದರ್ಶನ್ ಪುಟ್ಟಣ್ಣಯ್ಯ ಅಮೆರಿಕದಲ್ಲಿ ಇದ್ದು ತನ್ನ ಹೆಸರಿನ ಮುಂದೆ ಇರುವ ‘ಪುಟ್ಟಣ್ಣಯ್ಯ’ ಅವರ ಹೆಸರಿನ ಘನತೆ ಆದರೂ ಉಳಿಸಬಹುದಿತ್ತು” ಕೆಲವರು ಅಸಮಾಧಾನ ಹೊರ ಹಾಕಿದ್ದಾರೆ.




