ಬೆಂಗಳೂರು : ಮಾಧ್ಯಮದವರು ಡೆಂಜರ್ ಇದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹುಸಿಗೋಪ ಪ್ರದರ್ಶಿಸಿದರು. ಮಾಧ್ಯಮದವರನ್ನು ಡಿಕೆಶಿ ಅವರು ಹೀಗೆ ಅಂದದ್ದಾದರೂ ಏತಕ್ಕೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ಮುಗಿಸಿ ತೆರಳಿದ ಬಳಿಕ, ಡಿ.ಕೆ.ಶಿವಕುಮಾರ್ ಬಳ್ಳಾರಿ ಘಟನೆಯ ಬಗ್ಗೆ ಮಾತನಾಡಲು ಅಲ್ಲೇ ಕುಳಿತಿದ್ದರು. ಮಾಧ್ಯಮಗಳ ಮೈಕುಗಳಿಗೆ ಹೊಂದಾಣಿಕೆಯಾಗುವಂತೆ ಮಧ್ಯದ ಕುರ್ಚಿಯಲ್ಲಿ ಕುಳಿತುಕೊಳ್ಳಲು ವರದಿಗಾರರು ಸಲಹೆ ನೀಡಿದರು, ಅದು ಮುಖ್ಯಮಂತ್ರಿಯವರ ಕುರ್ಚಿಯಾಗಿತ್ತು!. ಈ ವೇಳೆ ಸಿಟ್ಟಾದ ಡಿಸಿಎಂ ಮಾಧ್ಯಮಗಳು ಬಹಳ ಡೇಂಜರ್ ಇವೆ. ನಾನು ಅಲ್ಲಿ ಕುಳಿತರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಾರೆ ಎಂದು ತೋರಿಸಿ, ಅದನ್ನೆ ದೊಡ್ಡ ವಿಚಾರ ಮಾಡಿ ಪ್ರಚಾರ ಮಾಡುತ್ತವೆ ಎಂದು ಹುಸಿಗೋಪ ಪ್ರದರ್ಶಿಸಿದರು.
ತಾವು ಕುಳಿತ ಕುರ್ಚಿಯೇ ಸಾಕು ಎಂಬ ಧಾಟಿಯಲ್ಲಿ ತಮ್ಮ ಜಾಗದಿಂದಲೇ ಬಳ್ಳಾರಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದರು.
ಬಳ್ಳಾರಿ ಗಲಾಟೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಆತನ ಕೊಲೆಗೆ ಬಿಜೆಪಿಯವರೇ ಹೊಣೆಗಾರರು. ತನಿಖೆ ತನ್ನ ಪಾಡಿಗೆ ತಾನು ನಡೆಯಲಿದೆ. ತಾವು ಪೊಲೀಸರ ಕಾರ್ಯನಿರ್ವಹಣೆಯಲ್ಲಿ ತಲೆ ಹಾಕುವುದಿಲ್ಲ. ಗೃಹ ಸಚಿವರು ಮತ್ತು ಮುಖ್ಯಮಂತ್ರಿಯವರು ಪೊಲೀಸರ ಜೊತೆ ಮಾತನಾಡಿದ್ದಾರೆ ಎಂದರು.
ಪಕ್ಷದ ವತಿಯಿಂದ ಹೆಚ್.ಎಂ.ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಸಮಿತಿ ಸದಸ್ಯರು ಬಳ್ಳಾರಿಗೆ ಭೇಟಿ ನೀಡಲಿದ್ದಾರೆ. ವಾಸ್ತವ ಅಂಶಗಳ ವರದಿ ನೀಡಲಿದ್ದಾರೆ ಎಂದರು.





