ಬೆಂಗಳೂರು: ರಾಜ್ಯದ ಬೇರೆ ಬೇರೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಒಂದೊಂದು ರೀತಿಯ ದರವಿದ್ದ ಹಿನ್ನೆಲೆ ಮನೆಗಳಿಗೆ ಗ್ಯಾಸ್ ಸಂಪರ್ಕ ಒದಗಿಸಲು ವಿಳಂಬವಾಗಿದೆ. ಇದೀಗ ಈ ಸಮಸ್ಯೆ ಬಗೆಹರಿದಿದ್ದು, ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಮನೆಗಳಿಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು(ಮಾರ್ಚ್.4) ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಗ್ಯಾಸ್ ಪೂರೈಕೆ ಕೊಳವೆ ಅಳವಡಿಸಲು ದೇಶದ ವಿವಿಧ ರಾಜ್ಯಗಳಲ್ಲಿ ಇರುವ ನಗರ ಅನಿಲ ಸರಬರಾಜು ನೀತಿಯ ಪ್ರಕಾರ ಮೀಟರ್‌ಗೆ ಒಂದು ರೂಪಾಯಿ ನಿಗಧಿಪಡಿಸಲಾಗಿದೆ. ಅಲ್ಲದೇ ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿನ ಉತ್ತಮ ಉಪಕ್ರಮಗಳ ಬಗ್ಗೆಯೂ ಕೇಂದ್ರ ಸರ್ಕಾರವೇ ರಾಜ್ಯಕ್ಕೆ ಪತ್ರ ಬರೆದು ತಿಳಿಸಿದೆ ಎಂದರು.
ರಾಜ್ಯದಲ್ಲಿ ಆ ವೇಳೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಸಾರ್ವಜನಿಕ ಹಿತ ಮತ್ತು ಪರಿಸರಸ್ನೇಹಿ ಕ್ರಮವೆಂದೂ ನಾವು ಇದನ್ನು ಒಪ್ಪಿಕೊಂಡಿದ್ದೇವೆ. ಅದರಂತೆ ರಾಜ್ಯದಲ್ಲಿ ಒಟ್ಟು 66.25 ಲಕ್ಷ ಮನೆಗಳಿಗೆ ಸಂಪರ್ಕ ಸೇವೆ ಕಲ್ಪಿಸುವ ಹಾಗೂ 1,022 ಸಿಎನ್‌ಜಿ ಮರುಪೂರ್ಣ ಕೇಂದ್ರಗಳನ್ನು ತೆರೆಯುವ ಗುರಿಯನ್ನಿಟ್ಟುಕೊಳ್ಳಾಗಿದೆ ಎಂದು ಹೇಳಿದರು.





