ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು, ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನಮಗೂ ಒಪ್ಪಂದವಿದೆ. ಈ ಒಪ್ಪಂದ 2023ಕ್ಕೆ ಮುಗಿಯಲಿದೆ. 2023ರ ಬಳಿಕ ನಾವು ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಬಹುದಾಗಿದೆ ಎಂದು ಅವರು ಹೇಳಿದರು.
ಪ್ರಯಾಣಿಕರ ಲೋಡ್ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದ್ದು, 2032ರ ವೇಳೆಗೆ ಕೆಐಎ ನಲ್ಲಿ ಜನಸಂದಣಿ ಹೆಚ್ಚಾಗಲಿದ್ದು, ಹೀಗಾಗಿ ನಮಗೆ ರಾಜಧಾನಿಯಲ್ಲಿ ಮತ್ತೊಂದು ಏರ್‌ಪೋರ್ಟ್ ಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮುಂಬೈ, ಗೋವಾ, ದೆಹಲಿಯಲ್ಲಿಯೂ ಸಹಾ ನೂತನ ಏರ್‌ಪೋರ್ಟ್‌ಗಳು ನಿರ್ಮಾಣವಾಗಿವೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೂ ವಿಮಾನ ನಿಲ್ದಾಣ ಬರಲಿದೆ. ಏರ್‌ಪೋರ್ಟ್‌ಗಾಗಿ ಜಾಗ, ಸ್ಥಳ ಇತರೆ ವಿಚಾರಗಳ ಬಗ್ಗೆ ಚರ್ಚಿಸಿ ಬಳಿಕ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.





