ಬೆಂಗಳೂರು: ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಧನವಾಗಿರುವ ಹಿನ್ನೆಲೆಯಲ್ಲಿ ಹುಟ್ಟೂರು ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಗ್ರಾಮಸ್ಥರು, ಚಿನ್ನಯ್ಯನ ತಂದೆ-ತಾಯಿ ಮೂಲತಃ ತಮಿಳುನಾಡಿನವರು. ಕೂಲಿ ಕೆಲಸಕ್ಕಾಗಿ ಬಂದು ನಮ್ಮ ಊರಿನಲ್ಲಿದ್ದರು. ಚಿನ್ನಯ್ಯ ಚಿಕ್ಕಬಳ್ಳಿ ಗ್ರಾಮದಲ್ಲೇ ಹುಟ್ಟಿ ಬೆಳೆದಿದ್ದ. ಇಲ್ಲಿನ ಸರ್ಕಾರಿ ಶಾಲೆಯಲ್ಲೇ ಓದಿದ್ದ ಎಂದು ತಿಳಿಸಿದ್ದಾರೆ.
ಆತ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಜೀವನ ನಿರ್ವಹಣೆಗಾಗಿ ಸರ್ಕಾರಿ ಯೋಜನೆಯ ಮೂಲಕ ಆತನಿಗೆ ಎರಡು ಹಸು ಖರೀದಿಸಲು ಬ್ಯಾಂಕ್‌ನಿಂದ ಸಾಲ ಕೊಡಿಸಿದ್ದೆ. ಅವುಗಳನ್ನು ರಾತ್ರೋರಾತ್ರಿ ಮಾರಿಕೊಂಡು ಪರಾರಿಯಾಗಿದ್ದ ಎಂದಿದ್ದಾರೆ.
ಮತ್ತೊಬ್ಬರು ಮಾತನಾಡಿ ಚಿನ್ನಯ್ಯ ತಮ್ಮ ಸಹಪಾಠಿ. ಒಂದೇ ಶಾಲೆಯಲ್ಲಿ ಓದಿದ್ದೆವು. ಆತ ಸುಳ್ಳುಗಾರ, ಮೈಗಳ್ಳ ಮತ್ತು ದುರಾಸೆಯ ಮನುಷ್ಯ. ಮಾಸ್ಕ್ ಧರಿಸಿ ಓಡಾಡುತ್ತಿದ್ದ ಆತನ ನಡಿಗೆ ಶೈಲಿ ನೋಡಿ ಚಿನ್ನಯ್ಯನೇ ಇರಬೇಕೆಂದು ನಾವು ಆರಂಭದಲ್ಲಿ ಶಂಕಿಸಿದ್ದೆವು. ಆತ ಭಾವನ ಹೆಸರನ್ನು ಹೇಳಿಕೊಂಡ ಮೇಲೆ ನಮಗೆ ಖಚಿತವಾಗಿತ್ತು.
ಧಾರ್ಮಿಕ ಕ್ಷೇತ್ರದ ಮೇಲೆ ಅಪಪ್ರಚಾರ ಮಾಡಿ, ಹೆಸರು ಕೆಡಿಸಲು ಯತ್ನಿಸಿದ್ದಕ್ಕಾಗಿ ತಕ್ಕ ಶಿಕ್ಷೆಯಾಗಿದೆ. ನಮಗೆ ಇದರಿಂದ ಸಂತಸವಾಗಿದೆ. ತಾನು ಧರ್ಮಸ್ಥಳದ ಅಧಿಕಾರಿಯವರಿಗೆ ಹತ್ತಿರದಲ್ಲಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ, ಆತ ಒಳ್ಳೊಳ್ಳೆಯ ಬಟ್ಟೆ ಧರಿಸಿ ಬರುತ್ತಿದ್ದ. ಒಂದಷ್ಟು ಬಟ್ಟೆಗಳನ್ನು ತಂದು ಇಲ್ಲಿ ಹಂಚುವ ಕೆಲಸ ಮಾಡುತ್ತಿದ್ದ. ಕೆಲವರು ತೆಗೆದುಕೊಳ್ಳುತ್ತಿದ್ದರು. ಇನ್ನು ಕೆಲವರು ನಿರಾಕರಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.



